ಇಂದು ಹೈ ವೋಲ್ವೇಜ್ ಕ್ಯಾಬಿನೆಟ್ ಮೀಟಿಂಗ್: NTPCಗೆ ಅನುಮತಿ, RCB ಕಾಲ್ತುಳಿತ ಕೇಸ್ ಚರ್ಚೆ

0 (10)

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ಕೊಪ್ಪಳ, ವಿಜಯಪುರ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (NTPC) ಯೋಜನೆಗೆ ಪ್ರಾಥಮಿಕ ಅಧ್ಯಯನಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ. ಸುತ್ತಮುತ್ತಲಿನ ಗ್ರಾಮಸ್ಥರ ವಿರೋಧದ ನಡುವೆಯೂ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅನುಮೋದನೆ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.

ದೇಶದ ದೀರ್ಘಕಾಲೀನ ಇಂಧನ ಕಾರ್ಯತಂತ್ರದ ಭಾಗವಾಗಿ ಕೇಂದ್ರ ಸರ್ಕಾರವು 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು NTPC ಯೋಜನೆಗೆ ಅನುಮತಿ ನೀಡಲು ಮುಂದಾಗಿದೆ.

RCB ಕಾಲ್ತುಳಿತ ಕೇಸ್ ಚರ್ಚೆ:

ದೇಶವನ್ನೇ ಬೆಚ್ಚಿಬೀಳಿಸಿದ RCB ಕಾಲ್ತುಳಿತ ಕೇಸ್ ಸಂಪುಟ ಸಭೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ. ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಸಲ್ಲಿಸಿದ ವರದಿಯ ಕುರಿತು ಚರ್ಚೆ ನಡೆಯಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ದೇವನಹಳ್ಳಿಯಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್:

ದೇವನಹಳ್ಳಿ ಬಳಿಯ 1,777 ಎಕರೆ ಭೂಮಿಯನ್ನು ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸಂಪುಟ ಸಭೆಯಲ್ಲಿ ಅಂತಿಮ ಚರ್ಚೆ ನಡೆಯಲಿದೆ. ಈ ವಿಷಯದಲ್ಲಿ ಸರ್ಕಾರದ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಆಂತರಿಕ ಭಿನ್ನಮತ ಶಮನಕ್ಕೆ ಪ್ರಯತ್ನ:

ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸಚಿವರೊಂದಿಗೆ ಒನ್-ಟು-ಒನ್ ಚರ್ಚೆ ನಡೆಸಿದ್ದು, ಆಂತರಿಕ ಭಿನ್ನಮತವನ್ನು ಶಮನಗೊಳಿಸಲು ಪ್ರಯತ್ನಿಸಲಾಗಿದೆ. ಸಭೆಯಲ್ಲಿ ಸುಭದ್ರ ಆಡಳಿತಕ್ಕಾಗಿ ಆಂತರಿಕ ಕಚ್ಚಾಟವನ್ನು ಕಡಿಮೆ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ.

Exit mobile version