ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ವರುಣನ ಆರ್ಭಟ. ಪದ್ಮನಾಭನಗರದಲ್ಲಿ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಬೃಹದಾಕಾರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ಗೆ ತೀವ್ರ ಹಾನಿಯಾಗಿದೆ. ಕಾರಿನ ಗಾಜುಗಳು ಪುಡಿಪುಡಿಯಾಗಿದ್ದು, ಬಾಗಿಲುಗಳು ಜಖಂಗೊಂಡಿವೆ. ಇದೇ ರೀತಿ ಮನೆಯ ಕಿಟಕಿಗಳೂ ಒಡೆದು ಚೂರಾಗಿವೆ.ಈ ಘಟನೆಯಲ್ಲಿ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿವೆ. ಸದ್ಯ ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಮಳೆಯ ರಭಸಕ್ಕೆ ಕೆಂಗೇರಿಯ ಗುರುಕುಲ ಆನಾಥಾಶ್ರಮವೂ ನಲುಗಿದೆ. ವೃಷಾಭವತಿ ನದಿಯ ನೀರು ಆಶ್ರಮಕ್ಕೆ ನುಗ್ಗಿದ್ದರಿಂದ ಭಾರೀ ಅವಾಂತರ ಸೃಷ್ಟಿಯಾಯಿತು. ರಾತ್ರಿ ಮಕ್ಕಳು ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಆಶ್ರಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳಿದ್ದರು. ತಕ್ಷಣವೇ ಸಿಬ್ಬಂದಿ ಮಕ್ಕಳನ್ನು ಸ್ಥಳೀಯ ಕಟ್ಟಡಕ್ಕೆ ಸ್ಥಳಾಂತರಿಸಿದರು.ಈ ಘಟನೆಯಿಂದ ಆಶ್ರಮದ ಆಡಳಿತ ಮಂಡಳಿಯು ಸ್ಥಳೀಯ ಆಡಳಿತದ ಸಹಾಯದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದೆ. ಆದರೆ, ಮಳೆಯಿಂದಾಗಿ ಆಶ್ರಮದ ಒಳಗಿನ ವಸ್ತುಗಳಿಗೆ ತೀವ್ರ ಹಾನಿಯಾಗಿದೆ.
ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಆರಂಭವಾಯಿತು. ಕೆಂಗೇರಿ, ನಾಯಂಡಹಳ್ಳಿ, ಮೈಸೂರು ರಸ್ತೆ, ರಾಜಾಜಿನಗರ, ಶಾಂತಿನಗರ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗಿದೆ. ಈ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.ಬೆಂಗಳೂರಿನ ಈ ಘಟನೆಗಳು ಮಳೆಗಾಲದಲ್ಲಿ ನಗರದ ಮೂಲಸೌಕರ್ಯದ ದೌರ್ಬಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ. ಸ್ಥಳೀಯ ಆಡಳಿತವು ತುರ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದೆ.