ಹಾಸನದಲ್ಲಿ ಕಾಡಾನೆ ಅಟ್ಟಹಾಸಕ್ಕೆ ವ್ಯಕ್ತಿ ಬಲಿ

ಈಶ್ವರ ಖಂಡ್ರೆ (7)

ಹಾಸನ, (ಜುಲೈ 31): ರಾಜ್ಯದಲ್ಲಿ ಕಾಡಾನೆಗಳ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಾನೆಗಳ ದಾಳಿಯಿಂದ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಿರೆಹಸಡೆ ಗ್ರಾಮದ ಸಮೀಪ ಕಾಡಾನೆ ದಾಳಿಗೆ 55 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿರುವ ದುರ್ಘಟನೆ ನಡೆದಿದೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಣಗುಪ್ಪೆ ಗ್ರಾಮದ ಧರ್ಮರಾಜ್ (55) ಅವರ ಮೃತದೇಹ ಇಂದು ಶುಕ್ರವಾರ ಪತ್ತೆಯಾಗಿದ್ದು, ಕಾಡಾನೆ ತುಳಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮಾಹಿತಿಯ ಪ್ರಕಾರ, ಜುಲೈ 29ರಂದು ಧರ್ಮರಾಜ್ ಅವರು ಬೇಲೂರಿಗೆ ತೆರಳಿ ವಾಪಸ್ ಮನೆಗೆ ಬರುತ್ತಿದ್ದರು. ತೊಳಲು ಗ್ರಾಮದ ಸಮೀಪ ಬಸ್‌ನಿಂದ ಇಳಿದು ಕಾಲ್ನಡಿಗೆಯಲ್ಲಿ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ. ಬಳಿಕ ಅವರು ಮನೆಗೆ ತಲುಪದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು.

ಎರಡು ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಹಿರೆಹಸಡೆ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಧರ್ಮರಾಜ್ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅರೇಹಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಕಣ್ಣೀರಿಟ್ಟರು. ಧರ್ಮರಾಜ್ ಅವರ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದೆ. ಆದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದ ಸ್ಥಳೀಯರು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆಗಳ ಹಾವಳಿಯನ್ನು ತಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಸರ್ಕಾರಿ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಕಾಡಾನೆಗಳ ಚಲನವಲನದ ಮೇಲೆ ನಿಗಾ ವಹಿಸುವುದಾಗಿ ತಿಳಿಸಿದ್ದಾರೆ.

Exit mobile version