ನಕಲಿ ಪೊಲೀಸರ ಸೋಗಿನಲ್ಲಿ ಸುಲಿಗೆ: ಪುಲಕೇಶಿನಗರ ಪೊಲೀಸರಿಂದ ಅಪ್ರಾಪ್ತ ಸೇರಿ ಐವರ ಬಂಧನ

123 2025 04 27t112748.915

ಬೆಂಗಳೂರಿನಲ್ಲಿ ನಕಲಿ ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡಿದ ಖತರ್ನಾಕ್ ಗ್ಯಾಂಗ್‌ವೊಂದನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ನಲ್ಲಿ ಒಬ್ಬ ಮಹಿಳೆಯೇ ತನ್ನ ಸಂಬಂಧಿಕರನ್ನೇ ಗುರಿಯಾಗಿಸಿ ಸುಲಿಗೆಗೆ ಯೋಜನೆ ರೂಪಿಸಿದ್ದಾಳೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಹೌದು ಏಪ್ರಿಲ್ 2ರಂದು ಸಂಜೆ 6:30 ರ ಸುಮಾರಿಗೆ ಈ ಘಟನೆ ನಡೆದಿದೆ. ಹೊಸೂರಿನಿಂದ ಬೆಂಗಳೂರಿಗೆ ತಮ್ಮ ಅಜ್ಜಿಯ ಮನೆಗೆ ಬಂದಿದ್ದ ಸೋಪಿಯಾ ಕುಟುಂಬ, ಬಾಣಸವಾಡಿಯಲ್ಲಿ ರೈಲಿನಿಂದ ಇಳಿದು ಆಟೋದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಆಟೋದಲ್ಲಿ ಅವರನ್ನು ಹಿಂಬಾಲಿಸಿದ ನಾಲ್ವರು ಖದೀಮರು, ಆಟೋವನ್ನು ಅಡ್ಡಗಟ್ಟಿದರು. ಆರೋಪಿ ಆಯೇಷಾ ಎಂಬಾಕೆ ವಿಡಿಯೋ ಕಾಲ್ ಮೂಲಕ ಸೋಪಿಯಾ ಕುಟುಂಬವನ್ನು ಗುರುತಿಸಿ, “ಇವರೇನಾ?” ಎಂದು ಖಚಿತಪಡಿಸಿಕೊಂಡು ಸುಲಿಗೆಗೆ ಮುಂದಾದರು.

ತಾವು ಪೊಲೀಸರು ಎಂದು ಬಿಂಬಿಸಿದ ಆರೋಪಿಗಳು, ಸೋಪಿಯಾ ಕುಟುಂಬದ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡರು. ಎರಡು ಗಲ್ಸರ್, ಎರಡು ಉಂಗುರ, ಮಾಂಗಲ್ಯ ಸರ ಮತ್ತು ಮೊಬೈಲ್‌ಗಳನ್ನು ಕಸಿದುಕೊಂಡ ಗ್ಯಾಂಗ್, ತಕ್ಷಣವೇ ಪರಾರಿಯಾಯಿತು.

ಸೋಪಿಯಾ ಕುಟುಂಬವು ಈ ಘಟನೆಯ ಬಗ್ಗೆ ಪುಲಕೇಶಿನಗರ ಠಾಣೆಯಲ್ಲಿ ದೂರು ದಾಖಲಿಸಿತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುಲಿಗೆಯ ನಂತರ ಆರೋಪಿಗಳು ಸಮೀಪದ ಟೀ ಅಂಗಡಿಯಲ್ಲಿ ಟೀ ಕುಡಿದಿರುವುದು ಕಂಡುಬಂದಿದೆ. ಈ ವೇಳೆ ಆರೋಪಿಗಳು ಫೋನ್‌ಪೇ ಮೂಲಕ ಹಣ ಪಾವತಿಸಿದ್ದರು. ಈ ಫೋನ್‌ಪೇ ನಂಬರ್‌ನ ಸಹಾಯದಿಂದ ಪೊಲೀಸರು ಗ್ಯಾಂಗ್‌ನ ಆಯೇಷಾ, ನಾಸೀರ್, ಝಕ್ರಿಯಾ ಮತ್ತು ಒಬ್ಬ ಅಪ್ರಾಪ್ತ ಸೇರಿದಂತೆ ಐವರನ್ನು ಬಂಧಿಸಿದರು.

ಆಯೇಷಾಳ ಖತರ್ನಾಕ್ ಪ್ಲಾನ್
ತನಿಖೆಯಲ್ಲಿ ಆಯೇಷಾ ತನ್ನ ಸಂಬಂಧಿಗಳಾದ ಸೋಪಿಯಾ ಕುಟುಂಬ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿರುವ ಮಾಹಿತಿಯನ್ನು ಪಡೆದು, ಈ ಸುಲಿಗೆಗೆ ಯೋಜನೆ ರೂಪಿಸಿದ್ದಾಳೆ ಎಂಬುದು ಬಯಲಾಯಿತು. ದೂರದಿಂದಲೇ ವಿಡಿಯೋ ಕಾಲ್ ಮೂಲಕ ಹೊಂಚು ಹಾಕಿ, ನಕಲಿ ಪೊಲೀಸರನ್ನು ಬಿಟ್ಟು ಸುಲಿಗೆ ಮಾಡಿಸಿದ ಆಯೇಷಾ, ಈ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದೆ.

ಪುಲಕೇಶಿನಗರ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ತನಿಖೆ ಇನ್ನೂ ಮುಂದುವರಿದಿದ್ದು, ಇಂತಹ ಕೃತ್ಯಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

    Exit mobile version