ಕಲಬುರಗಿಯ ಡಾ. ಶರಣಬಸಪ್ಪ ಅಪ್ಪಾ ಲಿಂಗೈಕ್ಯ: ಸಚಿವ ಪ್ರಿಯಾಂಕ ಭಾವುಕ ಖರ್ಗೆ ಸಂತಾಪ!

1 (34)

ಕಲಬುರಗಿ: ಶರಣರ ನಾಡಾದ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸಪ್ಪ ಅಪ್ಪಾ ಅವರು ಲಿಂಗೈಕ್ಯರಾಗಿರುವುದು ಅತೀವ ನೋವು ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಯಕ ಜೀವಿಯಾಗಿ, ಮಹಾ ದಾಸೋಹಿಯಾಗಿ, ಶರಣ ಪರಂಪರೆಯ ಉದಾತ್ತ ಚಿಂತನೆಗಳ ವಕ್ತಾರರಾಗಿ, ಕಲಬುರಗಿಯ ಜನತೆಗೆ ತಾತ್ವಿಕ ಮಾರ್ಗದರ್ಶಕರಾಗಿದ್ದ ಡಾ. ಶರಣಬಸಪ್ಪ ಅಪ್ಪಾ ಅವರು ಸಮಾಜದ ಏಳಿಗೆಗಾಗಿ ಶ್ರಮಿಸಿದರು. ಕಲಬುರಗಿಯ ಸೌಹಾರ್ದ ಪರಂಪರೆಗೆ ಶಕ್ತಿಯಾಗಿದ್ದ ಅವರು, ನನಗೆ ರಾಜಕೀಯ ಮತ್ತು ಜೀವನ ಮೌಲ್ಯಗಳ ಮಾರ್ಗದರ್ಶಕರಾಗಿದ್ದರು. “ನಾನು ಅವರಿಂದ ಬದುಕಿನ ಮೌಲ್ಯಗಳನ್ನು ಕಲಿತಿದ್ದೇನೆ. ಅವರು ನನಗೆ ಬಹುದೊಡ್ಡ ಪ್ರೇರಕ ಶಕ್ತಿಯಾಗಿದ್ದರು. ಅವರಿಲ್ಲದಿರುವುದನ್ನು ಕಲ್ಪಿಸಿಕೊಳ್ಳಲು ಕಷ್ಟವಾಗುತ್ತಿದೆ,” ಎಂದು  ಸಚಿವ ಪ್ರಿಯಾಂಕ ಖರ್ಗೆ ಎಕ್ಸ್‌ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಕಲಬುರಗಿಯ ಭಾವೈಕ್ಯತೆಗೆ ಶರಣಬಸವೇಶ್ವರ ಸಂಸ್ಥಾನ ಮತ್ತು ಬಂದೆನವಾಜ್ ದರ್ಗಾದ ಡಾ. ಸಯ್ಯದ್ ಶಾ ಖುಸ್ರೋ ಹುಸೇನಿ ಎರಡು ಕಣ್ಣುಗಳಂತಿದ್ದರು. ಒಂದು ವರ್ಷದಲ್ಲಿ ಈ ಇಬ್ಬರೂ ಮಹನೀಯರನ್ನು ಕಳೆದುಕೊಳ್ಳುವ ಮೂಲಕ ಎರಡು ಕಣ್ಣುಗಳನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಂತೆ ಭಾಸವಾಗುತ್ತಿದೆ. ಡಾ. ಶರಣಬಸಪ್ಪ ಅಪ್ಪಾ ಅವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರವಾದದ್ದು. “ವಿದ್ಯೆಯು ಸರ್ವರಿಗೂ ಸಿಗಬೇಕು, ಅದು ಶ್ರೀಮಂತರ ಸೊತ್ತಲ್ಲ” ಎಂಬ ಆಶಯದೊಂದಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹವನ್ನು ನೀಡಿದ್ದಾರೆ.

91 ವರ್ಷಗಳ ತುಂಬು ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ಕಲಬುರಗಿ ಜಿಲ್ಲೆಯ ಜನರ ಏಳಿಗೆಗೆ ಅವರ ಶಿಕ್ಷಣ ಕೊಡುಗೆಯು ಪ್ರಮುಖ ಮೆಟ್ಟಿಲಾಗುತ್ತದೆ “ಅವರ ಆತ್ಮಕ್ಕೆ ಶಾಂತಿ ಸಿಗಲಿ, ನಾನೂ ಸೇರಿದಂತೆ ಅವರ ಅಭಿಮಾನಿಗಳು, ಭಕ್ತರು, ಮತ್ತು ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ. ಶ್ರೀಗಳ ಮಾರ್ಗದರ್ಶನವು ಎಂದಿಗೂ ನಮಗೆ ಪ್ರೇರಕ ಶಕ್ತಿಯಾಗಿರಲಿದೆ,” ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ.

Exit mobile version