ಇಂದು ವಿಧಾನಸೌಧದಲ್ಲಿ ಪ್ರತಿಧ್ವನಿಸಲಿದೆ ಧರ್ಮಸ್ಥಳ ಕೇಸ್: SIT ತನಿಖೆ ಬಗ್ಗೆ ಪರಮೇಶ್ವರ್ ಉತ್ತರ!

ಬಿಜೆಪಿ vs ಕಾಂಗ್ರೆಸ್: ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬಿಸಿ ಏರಿಕೆ!

Untitled design 2025 08 18t085042.043

ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯ ಪ್ರಗತಿ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಈ ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಸರ್ಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ.

ಭಾನುವಾರ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಹಮ್ಮಿಕೊಂಡು ಮಂಜುನಾಥಸ್ವಾಮಿ ದರ್ಶನ ಮಾಡಿ, ವೀರೇಂದ್ರ ಹೆಗಡೆಯವರೊಂದಿಗೆ ಚರ್ಚೆ ನಡೆಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದು, ಇದು ಮತ್ತಷ್ಟು ಕುತೂಹಲ ಮೂಡಿಸಿದೆ. ಎಸ್‌ಐಟಿ ತನಿಖೆ ಮುಂದುವರಿದಿದ್ದು, ಇಂದು ಸ್ಥಳದಲ್ಲಿ ಮಹಜರು ನಡೆಸುವ ಸಾಧ್ಯತೆಯಿದೆ.

ಅನಾಮಧೇಯ ದೂರಿನ ಆಧಾರದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಕಳೆದ 15 ದಿನಗಳಿಂದ ಧರ್ಮಸ್ಥಳದಲ್ಲಿ ಗುಂಡಿ ತೋಡುವ ಕಾರ್ಯ ನಡೆಯುತ್ತಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿದವರ ಹೆಸರು ಬಹಿರಂಗಪಡಿಸಬೇಕು ಮತ್ತು ಮುಸುಕುಧಾರಿಯನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎಸ್‌ಐಟಿ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂಬುದು ಬಿಜೆಪಿಯ ಪಟ್ಟು.

ಡಿಸಿಎಂ ಡಿಕೆ ಶಿವಕುಮಾರ್ ಅವರು ಷಡ್ಯಂತ್ರವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಗೃಹ ಸಚಿವ ಪರಮೇಶ್ವರ್ ಅವರು ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ. ಇದು ಕಾನೂನಾತ್ಮಕ ಕೇಸ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಾರೆ. ತಪ್ಪು ಸಾಬೀತಾದರೆ ಕೇಸ್ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂದು ಸದನದಲ್ಲಿ ಸರ್ಕಾರದ ನಿಲುವು ಮತ್ತು ತನಿಖೆಯ ಭವಿಷ್ಯದ ಬಗ್ಗೆ ಉತ್ತರ ನೀಡಲಿದ್ದಾರೆ.

Exit mobile version