ಪತಿಯ ಹ*ತ್ಯೆ ಪ್ರಕರಣ: ಪತ್ನಿಗೆ ಜೀವಾವಧಿ ಶಿಕ್ಷೆ

ಆತ್ಮಹತ್ಯೆ! (3)

ದಾವಣಗೆರೆಯ ಚನ್ನಗಿರಿ ತಾಲೂಕಿನ ಚಿಕ್ಕಕೋಗಲೂರು ಗ್ರಾಮದಲ್ಲಿ ಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪತಿ ಶಾಂತಕುಮಾರ್ ಅವರನ್ನು ಕೊಡಲಿಯಿಂದ ಹೊಡೆದು ಗಾಯಗೊಳಿಸಿ, ಬಳಿಕ ಅವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿ ರೇಖಾ (36) ಅವರಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

ಚಿಕ್ಕಕೋಗಲೂರು ಗ್ರಾಮದ ರೇಖಾ ಮತ್ತು ಅವರ ಪತಿ ಶಾಂತಕುಮಾರ್ ನಡುವೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. 2023ರ ಮಾರ್ಚ್ 21ರಂದು ರಾತ್ರಿ ಶಾಂತಕುಮಾರ್ ಮಲಗಿದ್ದ ವೇಳೆ ರೇಖಾ ಕೊಡಲಿಯಿಂದ ಅವರ ತಲೆಗೆ ಹಲ್ಲೆ ನಡೆಸಿದ್ದರು. ಈ ದಾಳಿಯಿಂದ ಶಾಂತಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು.

ಗಾಯಗೊಂಡಿದ್ದ ಶಾಂತಕುಮಾರ್ ಅವರನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು 2023ರ ಆಗಸ್ಟ್ 25ರಂದು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ಕೊಲೆ ಯತ್ನದ ದೂರು ದಾಖಲಾಗಿತ್ತು.

ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಕೆ

ಪ್ರಕರಣದ ತನಿಖೆಯನ್ನು ಸಂತೆಬೆನ್ನೂರು ಪೊಲೀಸ್ ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಕೈಗೊಂಡಿದ್ದರು. ಸಾಕ್ಷಿದಾರರ ಹೇಳಿಕೆಗಳು ಹಾಗೂ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು, ಹಲ್ಲೆಯಿಂದ ಉಂಟಾದ ಗಾಯಗಳ ಪರಿಣಾಮವಾಗಿ ಶಾಂತಕುಮಾರ್ ಮೃತಪಟ್ಟಿರುವುದನ್ನು ದೃಢಪಡಿಸುವ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಬಳಿಕ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ

ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಆರ್. ಪಡಸಲಗಿ ಅವರು, ಆರೋಪಿ ರೇಖಾ ಅವರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ, 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣವು ಪತಿಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇದೀಗ ನ್ಯಾಯಾಲಯದ ತೀರ್ಪಿನೊಂದಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ.

Exit mobile version