ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಕೆನರಾ ಬ್ಯಾಂಕ್‌ನಲ್ಲಿ ಬಂಗಾರದ ಸಾಲ (ಗೋಲ್ಡ್ ಲೋನ್) ನವೀಕರಣಕ್ಕೆಂದು ಬಂದಿದ್ದ ಮಹಿಳೆಯ 3.5 ಲಕ್ಷ ರೂಪಾಯಿ ಹಣವನ್ನು ಕಳ್ಳಿಯರು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದ ನಿವಾಸಿ ಲತಾ ತನ್ನ ಪತಿಯೊಂದಿಗೆ ಕೆನರಾ ಬ್ಯಾಂಕ್‌ಗೆ ಗೋಲ್ಡ್ ಲೋನ್ ರಿನಿವಲ್ ಮಾಡಲು ತೆರಳಿದ್ದರು. ಈ ವೇಳೆ, ಪೆನ್ ನೀಡುವ ನೆಪದಲ್ಲಿ ಖತರ್ನಾಕ್ ಕಳ್ಳಿಯರ ಗುಂಪೊಂದು ಲತಾ ಬಳಿ ಇದ್ದ 3.5 ಲಕ್ಷ ರೂಪಾಯಿಯನ್ನು ಎಗರಿಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳವಾದ ಹಣದ ಬಗ್ಗೆ ತಿಳಿದ ತಕ್ಷಣ ಲತಾ ಮತ್ತು ಆಕೆಯ ಪತಿ ಎಚ್ಚೆತ್ತುಕೊಂಡು, ತಕ್ಷಣ ಕಾರ್ಯಪ್ರವೃತ್ತರಾಗಿ ಮಧ್ಯಪ್ರದೇಶ ಮೂಲದ ಇಬ್ಬರು ಕಳ್ಳಿಯರನ್ನು ಹಿಡಿದು, ಅವರ ಬಳಿಯಿಂದ 2.5 ಲಕ್ಷ ರೂಪಾಯಿಯನ್ನು ವಾಪಸ್ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಉಳಿದ 1 ಲಕ್ಷ ರೂಪಾಯಿಯೊಂದಿಗೆ ಮತ್ತೊಬ್ಬ ಕಳ್ಳಿ ತಪ್ಪಿಸಿಕೊಂಡಿದ್ದಾಳೆ.
ಸಂತೆಬೆನ್ನೂರು ಪೊಲೀಸರು ಈಗಾಗಲೇ ಬಂಧಿತರಾದ ಇಬ್ಬರು ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದ್ದು, ತಪ್ಪಿಸಿಕೊಂಡಿರುವ ಇನ್ನೊಬ್ಬ ಕಳ್ಳಿಯ ಶೋಧಕ್ಕಾಗಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆ ಸಂತೆಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.