ಡಿ ಗ್ಯಾಂಗ್‌ಗೆ ಮತ್ತೆ ಟೆನ್ಷನ್ ಶುರು: ರೇಣುಕಾಸ್ವಾಮಿ ಕೇಸ್ ವಿಚಾರಣೆ ಸೆ.9ಕ್ಕೆ ಮುಂದೂಡಿದ ಕೋರ್ಟ್!

Untitled design 2025 08 12t120326.262

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಮತ್ತು ಆತನ ಗ್ಯಾಂಗ್‌ಗೆ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಾಗಿದೆ. 64ನೇ ಸೆಷನ್ಸ್ ಕೋರ್ಟ್‌ನಲ್ಲಿ ಈ ಕೇಸ್‌ಗೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆಯನ್ನು ನ್ಯಾಯಾಧೀಶ ಐ.ಪಿ.ನಾಯ್ಕ್ ಅವರು ಸೆಪ್ಟೆಂಬರ್ 9, 2025ಕ್ಕೆ ಮುಂದೂಡಿದ್ದಾರೆ.

ಇಂದಿನ ವಿಚಾರಣೆಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಹಾಜರಾಗಿದ್ದರು. ಆದರೆ, ಕಳೆದ ವಿಚಾರಣೆಯಲ್ಲಿ ಕೆಲವು ಆರೋಪಿಗಳು ಗೈರಾಗಿದ್ದರು. ಕೋರ್ಟ್ ಈಗ ಚಾರ್ಜ್ ಫ್ರೇಮ್‌ಗಾಗಿ ಎರಡೂ ಕಡೆಯ ವಾದಗಳನ್ನು ಆಲಿಸಲಿದೆ. ಚಾರ್ಜ್ ಫ್ರೇಮ್ ಎಂದರೆ ಆರೋಪಿಗಳ ಮೇಲೆ ಯಾವ ಸೆಕ್ಷನ್‌ಗಳಡಿ ದೋಷಾರೋಪಣೆ ಮಾಡಲಾಗುವುದು ಎಂಬುದನ್ನು ಕೋರ್ಟ್ ಘೋಷಿಸುವ ಪ್ರಕ್ರಿಯೆಯಾಗಿದೆ. ಈ ಸೆಕ್ಷನ್‌ಗಳ ಕುರಿತು ಮುಂದಿನ ವಿಚಾರಣೆಯಲ್ಲಿ ವಾದ-ವಿವಾದ ನಡೆಯಲಿದೆ.

ಈ ಮಧ್ಯೆ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಮೇಲ್ಮನವಿಯ ವಿಚಾರಣೆ ನಡೆದಿದ್ದು, ಆದೇಶವನ್ನು ಕಾಯ್ದಿರಿಸಲಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಟ್ರಯಲ್ ಆರಂಭದ ಕುರಿತು ಪ್ರಶ್ನಿಸಿತ್ತು. ಸರ್ಕಾರದ ಪರ ವಕೀಲರು ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಆದರೆ, ಇಂದಿನ ವಿಚಾರಣೆಯಲ್ಲಿ ಟ್ರಯಲ್ ದಿನಾಂಕ ನಿಗದಿಯಾಗದೇ, ಸೆಪ್ಟೆಂಬರ್ 9ಕ್ಕೆ ಮುಂದೂಡಲ್ಪಟ್ಟಿದೆ.

ಒಂದೆಡೆ ಸೆಷನ್ಸ್ ಕೋರ್ಟ್‌ನಲ್ಲಿ ಟ್ರಯಲ್ ಆರಂಭದ ಒತ್ತಡವಿದ್ದರೆ, ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಆದೇಶದ ಕುರಿತಾದ ಕಾತರವು ಆರೋಪಿಗಳಿಗೆ ಟೆನ್ಷನ್ ಹೆಚ್ಚಿಸಿದೆ. ಈ ಕೇಸ್ ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ವಿಚಾರಣೆಯ ಕಡೆ ಎಲ್ಲರ ಕಣ್ಣು ನೆಟ್ಟಿದೆ.

Exit mobile version