ಮಂಗಳೂರು ವಂದೇ ಭಾರತ್‌ಗೆ ಮತ್ತೊಂದು ಟ್ರಯಲ್ ಸಕ್ಸಸ್

Untitled design (81)

ಮಂಗಳೂರು, ಸೆಪ್ಟೆಂಬರ್ 11: ಯಶವಂತಪುರ–ಮಂಗಳೂರು ಜಂಕ್ಷನ್ ನಡುವಿನ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ವೇಳೆ ರೈಲ್ವೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸಿ ಸಂಚಾರದ ಸಮಯ, ಕಾರ್ಯಾಚರಣಾ ಅಂಶಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿದರು.

ವಿದ್ಯುತ್ (TRD ಮತ್ತು TRO), ಮೆಕ್ಯಾನಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗಗಳ ಅಧಿಕಾರಿಗಳು ಎರಡನೇ ಪ್ರಯೋಗಾತ್ಮಕ ಸಂಚಾರದಲ್ಲಿ ಭಾಗವಹಿಸಿದ್ದರು. ರೈಲಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗಿದ್ದು, ನಿಗದಿಪಡಿಸಿದ್ದ ಸಮಯಕ್ಕಿಂತ ಮುಂಚಿತವಾಗಿಯೇ ಸಂಚಾರ ಪೂರ್ಣಗೊಂಡಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಸಂಚಾರದಲ್ಲಿ ತಾಂತ್ರಿಕ ಸಮಸ್ಯೆ

ಈ ಮಾರ್ಗದಲ್ಲಿ ನಡೆದ ಮೊದಲ ಪ್ರಯೋಗಾತ್ಮಕ ಸಂಚಾರದ ವೇಳೆ ಘಾಟ್ ಪ್ರದೇಶದಲ್ಲಿ ಬೀಸಿದ ಬಲವಾದ ಗಾಳಿ ಹಾಗೂ ಓವರ್‌ಹೆಡ್ ಉಪಕರಣ ಮತ್ತು ರೈಲಿನ ಪ್ಯಾಂಟೋಗ್ರಾಫ್ ನಡುವಿನ ಹೊಂದಾಣಿಕೆಗೆ ಸಂಬಂಧಿಸಿದ ಸಮಸ್ಯೆಯಿಂದ ಸಂಚಾರದಲ್ಲಿ ವಿಳಂಬವಾಗಿತ್ತು.

ಸದ್ಯ ಎರಡನೇ ಪ್ರಯೋಗಾತ್ಮಕ ಸಂಚಾರ ಯಶಸ್ವಿಯಾಗಿದ್ದರೂ, ಇನ್ನೂ ಕೆಲವು ತಾಂತ್ರಿಕ ಸಮಸ್ಯೆಗಳು ಬಗೆಹರಿಯಬೇಕಿದ್ದರೆ ಮತ್ತೊಂದು ಪ್ರಾಯೋಗಿಕ ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರೈಲಿನ ಸುರಕ್ಷಿತ ಮತ್ತು ಸುಗಮ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಂಡ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕಬಕ–ಪುತ್ತೂರಿನಲ್ಲಿ ನಿಲುಗಡೆಗೆ ಅವಕಾಶ

ಇದರ ನಡುವೆ ಮಂಗಳೂರು–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಬಕ–ಪುತ್ತೂರು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ಪ್ರಾಯೋಗಿಕ ಅವಕಾಶ ನೀಡಿರುವುದನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದ್ದಾರೆ.

ಸೆಪ್ಟೆಂಬರ್ 5ರಂದು ನಡೆದ ಮೊದಲ ಪೂರ್ಣ ಪ್ರಮಾಣದ ಸಂಚಾರದಲ್ಲಿ ಕಬಕ–ಪುತ್ತೂರು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ನೀಡಿರಲಿಲ್ಲ. ಇದೀಗ ಪ್ರಾಯೋಗಿಕವಾಗಿ ನಿಲುಗಡೆಗೆ ಅವಕಾಶ ನೀಡಿರುವುದು ಈ ಭಾಗದ ಪ್ರಯಾಣಿಕರಿಗೆ ಸಂತಸ ತಂದಿದೆ.

ಮುಂದಿನ ದಿನಗಳಲ್ಲಿ ಕಬಕ–ಪುತ್ತೂರು ನಿಲುಗಡೆಯನ್ನು ಶಾಶ್ವತಗೊಳಿಸುವುದರ ಜೊತೆಗೆ ರೈಲಿನ ವೇಳಾಪಟ್ಟಿಯಲ್ಲಿಯೂ ಅಗತ್ಯ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು–ಮಂಗಳೂರು ನಡುವೆ ವೇಗದ ಹಾಗೂ ಆರಾಮದಾಯಕ ರೈಲು ಸಂಪರ್ಕದ ನಿರೀಕ್ಷೆಯಲ್ಲಿರುವ ಕರಾವಳಿ ಭಾಗದ ಪ್ರಯಾಣಿಕರಿಗೆ ವಂದೇ ಭಾರತ್ ಸೇವೆ ಪ್ರಮುಖವಾಗಿದ್ದು, ಪ್ರಾಯೋಗಿಕ ಸಂಚಾರಗಳ ಬಳಿಕ ರೈಲಿನ ಅಂತಿಮ ವೇಳಾಪಟ್ಟಿ ಮತ್ತು ನಿಲುಗಡೆಗಳ ಕುರಿತು ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.

Exit mobile version