ಬಂಟ್ವಾಳ (ದಕ್ಷಿಣ ಕನ್ನಡ), ಜುಲೈ 16: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಗುರುವಾರ ಸಂಜೆ ಯುವಕನೊಬ್ಬ ಸಾರ್ವಜನಿಕರ ಎದುರೇ ಯುವತಿಯೊಬ್ಬಳನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.
ಮೃತರನ್ನು ಕಕ್ಯಪದವು ಮೈರ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ (25) ಎಂದು ಗುರುತಿಸಲಾಗಿದೆ. ದೂರದ ಸಂಬಂಧಿಯಾಗಿರುವ ಚೇತನ್ ಕೊಲೆ ಆರೋಪಿ. ಆಕೆ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದಳು.
ಆಕೆ ತನ್ನ ಕೆಲಸ ಮುಗಿಸಿ ಮನೆಗೆ ತೆರಳಲು ಎಂದಿನಂತೆ ಬಿ.ಸಿ.ರೋಡ್ ಬಸ್‌ನಿಲ್ದಾಣದಲ್ಲಿ ಕಕ್ಯಪದವಿಗೆ ಹೋಗುವ ಬಸ್ ಹತ್ತಿದ್ದಾಳೆ. ಆರೋಪಿ ಚೇತನ್ ಬಸ್‌ನಿಲ್ದಾಣದ ಬಳಿ ಕಾಯುತ್ತಿದ್ದ. ಆಕೆ ಬಸ್‌ನಲ್ಲಿ ಕುಳಿತಿದ್ದಾಗ ಬಸ್ ಹತ್ತಿದ್ದ ಪಾಪಿ ಚೇತನ್ ಬ್ಯಾಗಿನಿಂದ ತಲವಾರು ತೆಗೆದಿದ್ದಾನೆ ಇದನ್ನು ನೋಡಿದ ಆಕೆ ತಕ್ಷಣ ಅಲ್ಲಿಂದ ಓಡಿದ್ದಾಳೆ ಆದರೂ ಆತ ಅವಳನ್ನು, ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಅಮಾನುಷವಾಗಿ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ತಲವಾರಿನಿಂದ ಬರ್ಬರವಾಗಿ ಕೊಚ್ಚಿದ್ದಾನೆ. ಸ್ವಲ್ಪ ದೂರ ಓಡುತ್ತಲೇ ಆಕೆ ಕುಸಿದು ಬಿದ್ದಿದ್ದಾಳೆ. ಬಿದ್ದಿದ್ದ ಆಕೆಯನ್ನು ತಕ್ಷಣವೇ ಅಲ್ಲಿದ್ದ ಸಾರ್ವಜನಿಕರು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸದೆ ಲಾವಣ್ಯ ಸಾವನ್ನಪ್ಪಿದ್ದಾಳೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾವಣ್ಯನಿಗೆ ದೂರದ ಸಂಬಂಧಿಯಾಗಿರುವ ಆರೋಪಿ ಚೇತನ್ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಲಾವಣ್ಯನಿಗೆ ಈ ಸಂಬಂಧದಲ್ಲಿ ಆಸಕ್ತಿ ಇರಲಿಲ್ಲ ಎಂಬ ಮಾಹಿತಿ ತನಿಖೆಯ ವೇಳೆ ತಿಳಿದು ಬಂದಿದೆ. ಇದೇ ಕಾರಣದಿಂದ ಈ ಕೊಲೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಯ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
