ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮದ ಶೇಖರ್ (35) ಎಂಬ ಯುವಕ ತನ್ನ ಪ್ರಿಯತಮೆಯನ್ನು ತನ್ನಿಂದ ದೂರ ಮಾಡಿದ ದುಃಖದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಿನ್ನೆ ನಡೆದಿದೆ. ಶೇಖರ್ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಾಲೇಜಿನ ಬಸ್ ಚಾಲಕರಾಗಿದ್ದಾರೆ.
ಶೇಖರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಯುವತಿ ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆಕೆ ಪ್ರತಿದಿನ ಶೇಖರ್ ಚಾಲನೆ ಮಾಡುವ ಕಾಲೇಜು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ಕ್ರಮೇಣ ಪ್ರೇಮವಾಯಿತು.
ಕೆಲವು ದಿನಗಳ ಹಿಂದೆ, ಈ ಜೋಡಿ ಮನೆಯಿಂದ ಓಡಿಹೋಗಿ ದೇವಸ್ಥಾನವೊಂದರಲ್ಲಿ ಗೌಪ್ಯವಾಗಿ ಮದುವೆಯಾಗಿದ್ದರು. ಆದರೆ, ಯುವತಿಯ ಪೋಷಕರು ತಮ್ಮ ಮಗಳು ಕಾಣೆಯಾದ ಬಗ್ಗೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದಂಪತಿಗಳು ಠಾಣೆಗೆ ಆಗಮಿಸಿದಾಗ, ಯುವತಿಯ ಪೋಷಕರು ರಾಜಕೀಯ ಒತ್ತಡವನ್ನು ಬಳಸಿ ಇಬ್ಬರನ್ನು ಬೇರ್ಪಡಿಸಲು ಯತ್ನಿಸಿದರು. ಆದರೂ, ಯುವತಿ ಶೇಖರ್ ಜೊತೆಗೆ ಇರಲು ದೃಢನಿರ್ಧಾರ ತೋರಿದ್ದಳು.
ಯುವತಿಯ ಪೋಷಕರು, ಆಷಾಢ ಮಾಸದ ಬಳಿಕ ಕಲ್ಯಾಣ ಮಂಟಪದಲ್ಲಿ ಮರುಮದುವೆ ಮಾಡುವ ಭರವಸೆ ನೀಡಿ, ಶೇಖರ್ ಮತ್ತು ಯುವತಿಯನ್ನು ತಮ್ಮ ಕಾರಿನಲ್ಲಿ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೆ ಕರೆದುಕೊಂಡು ಹೋಗುವ ದಾರಿಮಧ್ಯೆ ಶೇಖರ್‌ನನ್ನು ಕಾರಿನಿಂದ ತಳ್ಳಿ, ಯುವತಿಯನ್ನು ಕರೆದೊಯ್ದದಿದ್ದಾರೆ.
ನಿನ್ನೆ (ಜು4) ಶುಕ್ರವಾರ ಬೆಳಿಗ್ಗೆ, ಶೇಖರ್ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದಾಗ, ಯುವತಿಯ ಪೋಷಕರು ಆತನನ್ನು ಗದರಿಸಿ ಕಳುಹಿಸಿದ್ದಾರೆ. ಈ ಘಟನೆಯಿಂದ ಮನನೊಂದ ಶೇಖರ್, ಕೌರನಹಳ್ಳಿಗೆ ವಾಪಸ್ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತನನ್ನು ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.