ಚಾಮುಂಡೇಶ್ವರಿಯಿಂದಲೇ ಕಾಂಗ್ರೆಸ್‌ ಸರ್ಕಾರದ ಅವನತಿ ಆರಂಭ: ಆರ್. ಅಶೋಕ್

ಚಾಮುಂಡಿ ದೇಗುಲದ ಬಗ್ಗೆ ಡಿಕೆಶಿಗೆ ಆರ್. ಅಶೋಕ್ ತಿರುಗೇಟು!

Untitled design (7)

ಮೈಸೂರು: ವಿಪಕ್ಷ ನಾಯಕ ಆರ್. ಅಶೋಕ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಕೆಲವು ನಿರ್ಧಾರಗಳು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳನ್ನು ಟೀಕಿಸಿದ ಆರ್. ಅಶೋಕ್, ಚಾಮುಂಡೇಶ್ವರಿಯಿಂದಲೇ ಕಾಂಗ್ರೆಸ್‌ ಸರ್ಕಾರದ ಅವನತಿ ಆರಂಭವಾಗಲಿದೆ ಎಂದರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಆರ್. ಅಶೋಕ್, ಸುದ್ದಿಗಾರರೊಂದಿಗೆ ಮಾತನಾಡಿ, ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ನಡೆ ಸರಿಯಲ್ಲ. ಇದು ಸಾಂಸ್ಕೃತಿಕ ಪರಂಪರೆಯನ್ನು ಅಗೌರವಿಸುವಂತಿದೆ,” ಎಂದು ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ, “ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ” ಎಂದು ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, “ನಿಮಗೆ ಧೈರ್ಯವಿದ್ದರೆ, ಮಸೀದಿಗಳು ಮುಸ್ಲಿಮರ ಆಸ್ತಿಯಲ್ಲ ಎಂದು ಹೇಳಿ. ಚಾಮುಂಡಿ ಬೆಟ್ಟದ ಬಗ್ಗೆ ಪದೇ ಪದೇ ಅಗೌರವದಿಂದ ಮಾತನಾಡಿದರೆ ಸುಮ್ಮನಿರುವುದಿಲ್ಲ. ಅಗತ್ಯವಿದ್ದರೆ ಚಾಮುಂಡಿ ಚಲೋ ಆಂದೋಲನವನ್ನೂ ಮಾಡಬೇಕಾಗುತ್ತದೆ,” ಎಂದು ಡಿ.ಕೆ. ಶಿವಕುಮಾರ್‌ಗೆ ಎಚ್ಚರಿಕೆ ನೀಡಿದರು.

“ಕಾಂಗ್ರೆಸ್ ಸರ್ಕಾರದ ಈ ರೀತಿಯ ನಡವಳಿಕೆಗೆ ಚಾಮುಂಡೇಶ್ವರಿ ತಾಯಿಯಿಂದಲೇ ಶಿಕ್ಷೆಯಾಗಲಿದೆ. ಇದರಿಂದ ಕಾಂಗ್ರೆಸ್‌ನ ಅವನತಿ ಆರಂಭವಾಗಲಿದೆ,” ಎಂದು ಆರ್. ಅಶೋಕ್  ವಾಗ್ದಾಳಿ ನಡೆಸಿದ್ದಾರೆ.

Exit mobile version