ಔರಾದ್‌ನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು: ಹನಿ ನೀರಿಗೂ ಹಾಹಾಕಾರ!

Your paragraph text (6)

ಬೀದರ್: ರಾಜ್ಯದ ಹಲವು ಭಾಗಗಳಲ್ಲಿ ಬೇಸಿಗೆಯ ಬಿಸಿಲಿನ ನಡುವೆಯೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಅದರಲ್ಲೂ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕೊಡ ನೀರು ತುಂಬಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ ಎದುರಾಗಿದ್ದು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ವೃದ್ಧರು ನೀರಿಗಾಗಿ ಪರದಾಡುತ್ತಿದ್ದಾರೆ.

ಮಾಜಿ ಸಚಿವ ಪ್ರಭು ಚೌಹಾಣ್ ಅವರ ಕ್ಷೇತ್ರವಾಗಿರುವ ಔರಾದ್ ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಭೀಕರ ಬರಗಾಲದ ಪರಿಣಾಮ ನೀರಿನ ಮೂಲಗಳು ಬತ್ತುತ್ತಿದ್ದು, ಜನರ ದೈನಂದಿನ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಟ್ಟಣದ ಹಲವು ಪ್ರದೇಶಗಳಲ್ಲಿ ಬೋರ್‌ವೆಲ್‌ಗಳಿದ್ದರೂ ನಲ್ಲಿಗಳಲ್ಲಿ ಹನಿ ಹನಿಯಾಗಿ ನೀರು ಬರುತ್ತಿದೆ. ಇದರಿಂದ ಜನರು ನೀರಿಗಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಕುಡಿಯುವ ನೀರು ಸಂಗ್ರಹಿಸಲು ಮಹಿಳೆಯರು ರಸ್ತೆಗಳಲ್ಲೇ ಕೊಡಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೊಡಗಳಷ್ಟೇ ಅಲ್ಲದೆ ದೊಡ್ಡ ಬ್ಯಾರಲ್‌ಗಳನ್ನು ಕೂಡ ನೀರು ಬರುವ ಸ್ಥಳಗಳಲ್ಲಿ ಸಾಲಾಗಿ ಇಡುತ್ತಿದ್ದಾರೆ. ಸುಡುವ ಬಿಸಿಲನ್ನೂ ಲೆಕ್ಕಿಸದೆ ನೀರಿಗಾಗಿ ಕಾಯುತ್ತಿದ್ದಾರೆ. ಕೂಲಿ ಕೆಲಸಕ್ಕೆ ತೆರಳಬೇಕಾದ ಮಹಿಳೆಯರು ಕೆಲಸ ಬಿಟ್ಟು ನೀರಿಗಾಗಿ ಅಲೆಯುವಂತಾಗಿದೆ. ಇನ್ನು ಶಾಲಾ-ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ಕೂಡ ನೀರು ತುಂಬಿಸಿಕೊಳ್ಳಲು ಸಮಯ ವ್ಯಯಿಸುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ.

ವೃದ್ಧರು ಕೂಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪಟ್ಟಣಕ್ಕೆ ಕಾರಂಜಾ ಜಲಾಶಯದಿಂದ ಬರುತ್ತಿದ್ದ ನೀರಿನ ಪೂರೈಕೆ ಸ್ಥಗಿತಗೊಂಡಿರುವುದು ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಪರ್ಯಾಯವಾಗಿ ತೇಗಂಪೂರ ಕೆರೆಯಿಂದ ನೀರು ಪೂರೈಸುವ ಭರವಸೆಯನ್ನು ಜನರು ಎದುರು ನೋಡುತ್ತಿದ್ದಾರೆ.

ಇತ್ತ ತಾಲೂಕು ಆಡಳಿತ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ, ಟ್ಯಾಂಕರ್‌ಗಳಿಂದ ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಟ್ಯಾಂಕರ್ ಮೂಲಕ ಬರುವ ನೀರು ಪ್ರಭಾವಿಗಳ ಪಾಲಾಗುತ್ತಿದೆ. ಬಡ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹಲವು ದಿನಗಳಿಂದ ನೀರಿಗಾಗಿ ಪರದಾಡುತ್ತಿರುವ ಜನರು ತಕ್ಷಣ ಸಮಸ್ಯೆ ಬಗೆಹರಿಸುವಂತೆ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್, ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಔರಾದ್ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಾಜಿ ಸಚಿವರ ಕ್ಷೇತ್ರದಲ್ಲೇ ಜನರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಚರ್ಚೆಗೆ ಕಾರಣವಾಗಿದೆ. ಜನರ ನೀರಿನ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವಾಗ ಸ್ಪಂದಿಸಲಿದ್ದಾರೆ? ತೇಗಂಪೂರ ಕೆರೆಯಿಂದ ನೀರು ಪೂರೈಕೆ ಆರಂಭವಾಗಿ ಔರಾದ್ ಜನರ ಹನಿ ನೀರಿನ ಹಾಹಾಕಾರಕ್ಕೆ ಯಾವಾಗ ಮುಕ್ತಿ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version