ಸಿಗರೇಟ್ ಸೇದುತ್ತಾ, ಕಾಲಿಂದ ಒದ್ದು ರೌಡಿಸಂ ಮಾಡಿದ ಲೇಡಿ ಕಾವ್ಯ..!

ಸಲೂನ್​ಗೆ ನುಗ್ಗಿ ಸಂಜು ಮೇಲೆ ಹಲ್ಲೆ, ಬಳಿಕ ಕಿಡ್ನಾಪ್ ಮಾಡಿ ಜೀವ ಬೆದರಿಕೆ!

Befunky collage 2025 05 30t130543.872

ಬೆಂಗಳೂರು: ಸಿಲಿಕಾನ್ ಸಿಟಿಯ ಅಮೃತಹಳ್ಳಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತಂಡದೊಂದಿಗೆ ಸಲೂನ್‌ಗೆ ನುಗ್ಗಿ, ಸಂಜು ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆ ನಿನ್ನೆ (ಮೇ 29) ರಾತ್ರಿ 8 ಗಂಟೆ ಸುಮಾರಿಗೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಲೂನ್‌ನ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾವ್ಯ ಎಂಬ ಮಹಿಳೆ ನೇತೃತ್ವದ ಗುಂಪು ಸಲೂನ್‌ಗೆ ಏಕಾಏಕಿ ನುಗ್ಗಿ, ಸಂಜುವಿನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ. ಸಿಸಿಟಿವಿ ದೃಶ್ಯಗಳಲ್ಲಿ ಕಾವ್ಯ ಸಿಗರೇಟ್ ಸೇದುತ್ತಾ, ಸಂಜುವಿನ ತಲೆ, ಬೆನ್ನು, ಮತ್ತು ಮುಖಕ್ಕೆ ಕಾಲಿನಿಂದ ಒದ್ದಿರುವ ದೃಶ್ಯ ಸೆರೆಯಾಗಿದೆ. ಹಲ್ಲೆಯ ನಂತರ, ಸಂಜುವನ್ನು ನೀಲಿ ಬಣ್ಣದ ಶಿಫ್ಟ್ ಕಾರಿನಲ್ಲಿ ಕಿಡ್ನಾಪ್ ಮಾಡಿ, ದಾಸರಹಳ್ಳಿ ಮುಖ್ಯ ರಸ್ತೆಯ ಮೂಲಕ ಜಕ್ಕೂರಿಗೆ ಕರೆದೊಯ್ದು, ಮಚ್ಚು, ಡ್ರ್ಯಾಗನ್, ಮತ್ತು ಬಿಯರ್ ಬಾಟಲ್‌ನಿಂದ ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂಜು ಆರೋಪಿಸಿದ್ದಾರೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಪೆಟ್ರೋಲ್ ಹಾಕಿ ಸುಟ್ಟುಬಿಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಘಟನೆಗೆ ಕಾರಣವೇನು?

ಸಂಜು ತಾನು ಕೆಲಸ ಮಾಡುತ್ತಿದ್ದ ಸ್ಪಾವನ್ನು ತೊರೆದು, ಹೊಸ ಸಲೂನ್ ಆರಂಭಿಸಿದ್ದಕ್ಕೆ ಈ ಗುಂಪು ಕೋಪಗೊಂಡು ಹಲ್ಲೆ ನಡೆಸಿರುವ ಸಾಧ್ಯತೆ ಇದೆ. ಕಾವ್ಯ, ಮಹ್ಮದ್, ಸ್ಮಿತಾ, ಮತ್ತು ಇಬ್ಬರು ಅಪರಿಚಿತರ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಂಜುವಿನ ಪತ್ನಿ ಸಿಸಿಟಿವಿ ದೃಶ್ಯಗಳನ್ನು ಗಮನಿಸಿ, ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಾದ ನಂತರ, ಪೊಲೀಸರು ಆರೋಪಿಗಳ ಗುಂಪಿನ ಒಬ್ಬ ಸದಸ್ಯರಿಗೆ ಫೋನ್ ಮಾಡಿದ್ದಾರೆ. ಇದರಿಂದ ಭಯಗೊಂಡ ಗುಂಪು ಸಂಜುವನ್ನು ಪೊಲೀಸ್ ಠಾಣೆಯ ಬಳಿ ಬಿಟ್ಟು ಪರಾರಿಯಾಗಿದೆ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Exit mobile version