ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ: ಮಾರತ್ತಹಳ್ಳಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ

02 (8)

ಬೆಂಗಳೂರು: ಸುದ್ದಗುಂಟೆಪಾಳ್ಯದ ಲೈಂಗಿಕ ದೌರ್ಜನ್ಯ ಘಟನೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಏಪ್ರಿಲ್ 30ರ ರಾತ್ರಿ ಮಾರತ್ತಹಳ್ಳಿಯಲ್ಲಿ ಯುವತಿಯೊಬ್ಬರ ಮೇಲೆ ಕಿಡಿಗೇಡಿಯಿಂದ ಲೈಂಗಿಕ ಕಿರುಕುಳ ನಡೆದಿದೆ. ಆರೋಪಿಯು ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ.

ಏಪ್ರಿಲ್ 30ರ ರಾತ್ರಿ 11:30ರ ಸುಮಾರಿಗೆ ಯುವತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕಿಡಿಗೇಡಿಯೊಬ್ಬ ಆಕೆಯನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಘಟನೆಯ ಬಗ್ಗೆ ಮಾರತ್ತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲು ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

ಸುದ್ದಗುಂಟೆಪಾಳ್ಯ ಘಟನೆಯ ಆರೋಪಿ ಬಂಧನ:

ಇತ್ತೀಚೆಗೆ ಸುದ್ದಗುಂಟೆಪಾಳ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆಯು ನಗರವಾಸಿಗಳನ್ನು ಬೆಚ್ಚಿಬೀಳಿಸಿತ್ತು. ತಡರಾತ್ರಿ ಗೆಳತಿಯೊಂದಿಗೆ ಹೋಗುತ್ತಿದ್ದ ಯುವತಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಎಳೆದಾಡಿ, ಮೈಕೈ ಮುಟ್ಟಿ ಕಿರುಕುಳ ನೀಡಿದ್ದ. ಆರೋಪಿಯು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ. ಈ ಘಟನೆಯ ಬಳಿಕ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ, 10 ದಿನಗಳ ಬಳಿಕ ಆರೋಪಿ ಸಂತೋಷ್‌ನನ್ನು ಕೇರಳದಲ್ಲಿ ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಕರಾಳ ಮುಖ ಬಯಲಾಗಿದ್ದು, ಲೇಡಿ ಹೋಮ್‌ಗಾರ್ಡ್‌ನ ಸಹಾಯವೂ ಈತನಿಗೆ ಸಿಕ್ಕಿತ್ತು ಎಂಬ ಸತ್ಯ ಬಹಿರಂಗವಾಗಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿಗೆ ಕರೆತಂದು, ಐದು ದಿನಗಳ ಕಸ್ಟಡಿಗೆ ಪಡೆಯಲಾಗಿದೆ.

ಪುಲಕೇಶಿನಗರದಲ್ಲಿ ಇದೇ ರೀತಿಯ ಘಟನೆ:

ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಇಂತಹದೇ ಘಟನೆಯೊಂದು ನಡೆದಿತ್ತು. ಅಂಗಡಿಯೊಂದರ ಮುಂದೆ ನಿಂತಿದ್ದ ಯುವತಿಯೊಬ್ಬರಿಗೆ ಆಟೋ ಚಾಲಕ ಮಣಿ ಎಂಬಾತ ಫೋನ್‌ ನಂಬರ್ ಕೇಳಿ, ಸೆಲ್ಫಿ ತೆಗೆದುಕೊಳ್ಳುವ ವಿಚಾರದಲ್ಲಿ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ಯುವತಿ ಪುಲಕೇಶಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರಿನ ಆಧಾರದ ಮೇಲೆ ಪೊಲೀಸರು ಮಣಿಯನ್ನು ಬಂಧಿಸಿದ್ದರು. 

Exit mobile version