ಬೆಂಗಳೂರು: ಕಾರು ಪಾರ್ಕಿಂಗ್ ವಿಚಾರಕ್ಕೆ ಉಂಟಾದ ಕಿರಿಕ್‌ನಿಂದ ಅಬಕಾರಿ ಇಲಾಖೆಯ ಮಹಿಳಾ ಕಾನ್ಸ್‌ಟೇಬಲ್ ಸಬ್ರೀನ್ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಜೀವನ್ ಭೀಮಾನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರು ಚಾಲಕ ಶಿವರಾಜ್ ತನ್ನ ವಾಹನವನ್ನು ರಿವರ್ಸ್ ತೆಗೆಯುವ ವೇಳೆ ಕಾನ್ಸ್‌ಟೇಬಲ್ ಸಬ್ರೀನ್ ಜೊತೆ ವಾಗ್ವಾದ ಉಂಟಾಗಿದೆ. “ಕಾರು ತಾಕುತ್ತದೆ” ಎಂದು ಸಬ್ರೀನ್ ಗಲಾಟೆ ಆರಂಭಿಸಿದ್ದಾರೆ. ಇದೇ ವಿಚಾರ ಕಿರಿಕ್‌ಗೆ ಕಾರಣವಾಗಿ, ಸಬ್ರೀನ್ ಶಿವರಾಜ್ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಘಟನೆಯ ವಿಡಿಯೋ ಚಿತ್ರೀಕರಿಸುತ್ತಿದ್ದ ದರ್ಶನ್ ಎಂಬ ಯುವಕನ ಮೇಲೂ ಸಬ್ರೀನ್ ದಾಳಿ ನಡೆಸಿದ್ದಾರೆ. ದರ್ಶನ್‌ನನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದಿರುವ ಆರೋಪವಿದೆ.
ಈ ಘಟನೆಗೆ ಸಂಬಂಧಿಸಿದಂತೆ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (ನಾನ್-ಕಾಗ್ನಿಜಬಲ್ ರಿಪೋರ್ಟ್) ದಾಖಲಾಗಿದೆ. ಠಾಣೆಗೆ ತೆರಳಿದ ಕಾನ್ಸ್‌ಟೇಬಲ್ ಸಬ್ರೀನ್, ಯುವಕರ ಬಳಿ ಕ್ಷಮೆಯಾಚಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಮಹಿಳಾ ಕಾನ್ಸ್‌ಟೇಬಲ್‌ನಿಂದ ಯುವಕರ ಮೇಲೆ ನಡೆದ ಹಲ್ಲೆ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾನ್ಸ್‌ಟೇಬಲ್‌ನ ವರ್ತನೆಯನ್ನು ಟೀಕಿಸಲಾಗುತ್ತಿದೆ.





