ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ.. ಮೆಟ್ರೋದಲ್ಲಿ ಹುಚ್ಚಾಟ ಆಡಿದ್ರೆ ಬೀಳುತ್ತೆ ದಂಡ

ಕೃಷ್ಣ (15)

ಬೆಂಗಳೂರು, ಜುಲೈ 17: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ದಂಡದ ನಿಯಮಗಳನ್ನು ಜಾರಿಗೆ ತಂದಿದ್ದು, ವಿವಿಧ ಉಲ್ಲಂಘನೆಗಳಿಗೆ ₹2,500ರಿಂದ ₹25,000ವರೆಗೆ ದಂಡ ವಿಧಿಸುವ ವ್ಯವಸ್ಥೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡುವುದು, ಅಸಭ್ಯ ವರ್ತನೆ, ಇಂತಹ ಅನೇಕ ಘಟನೆಗಳು ನಡೆಯುತ್ತಿದೆ. ಕೆಲವೊಂದು ವರ್ತನೆಯಿಂದ ಜನ ಸಾಮಾನ್ಯರಿಗೆ ಕಿರಿ ಕಿರಿ, ಗೊಂದಲ ಉಂಟಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ದಂಡದ ಬಿಸಿ ಮುಟ್ಟಿಸಲು ಹೊರಟಿದೆ.

ಹೊಸ ನಿಯಮದ ಪ್ರಕಾರ, ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುವುದು, ಟ್ರ್ಯಾಕ್ ಮೇಲೆ ಓಡಾಡುವುದು, ಟಿಕೆಟ್ ಅಥವಾ ಪಾಸ್‌ಗಳ ದುರ್ಬಳಕೆ ಸೇರಿದಂತೆ ಗಂಭೀರ ಉಲ್ಲಂಘನೆಗಳಿಗೆ ₹5,000ರಿಂದ ₹25,000ವರೆಗೆ ದಂಡ ವಿಧಿಸಲಾಗುತ್ತದೆ.

ಮೆಟ್ರೋ ನಿಲ್ದಾಣ ಅಥವಾ ರೈಲಿನೊಳಗೆ ಅನುಮತಿ ಇಲ್ಲದೆ ವ್ಯಾಪಾರ ನಡೆಸಿದರೆ ₹5,000 ದಂಡ ವಿಧಿಸಲಾಗುತ್ತದೆ.

ಇದುವರೆಗೆ ಮೆಟ್ರೋದಲ್ಲಿ ರೀಲ್ಸ್ ಮಾಡುವುದು, ಆಹಾರ ಸೇವಿಸುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಅಥವಾ ಜೋರಾಗಿ ಸಂಗೀತ ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದರೆ ₹500 ದಂಡ ಮಾತ್ರ ಇತ್ತು. ಆದರೆ ಹೊಸ ನಿಯಮದಂತೆ ಈ ಉಲ್ಲಂಘನೆಗಳಿಗೆ ₹2,500ರಿಂದ ₹10,000ವರೆಗೆ ದಂಡ ವಿಧಿಸಲಾಗುತ್ತದೆ.

ಅದೇ ರೀತಿ, ಮೆಟ್ರೋ ನಿಲ್ದಾಣದ ಗೋಡೆಗಳ ಮೇಲೆ ಬರೆಯುವುದು, ಪೋಸ್ಟರ್ ಅಂಟಿಸುವುದು ಅಥವಾ ಚಿತ್ರ ಬಿಡಿಸುವುದು ಮೊದಲಾದ ಕೃತ್ಯಗಳಿಗೆ ಈ ಹಿಂದೆ ಇದ್ದ ₹1,000 ದಂಡವನ್ನು ₹10,000ಕ್ಕೆ ಹೆಚ್ಚಿಸಲಾಗಿದೆ.

ಮದ್ಯಪಾನ ಮಾಡಿ ಪ್ರಯಾಣಿಸುವುದು, ಜಗಳವಾಡುವುದು ಅಥವಾ ಉಗುಳುವುದು ಸೇರಿದಂತೆ ಮೆಟ್ರೋ ಕಾಯ್ದೆಯ ಸೆಕ್ಷನ್ 59(1) ಅಡಿಯಲ್ಲಿ ಬರುವ ಉಲ್ಲಂಘನೆಗಳಿಗೆ ₹500ರಿಂದ ₹2,500ಕ್ಕೆ ದಂಡ ಹೆಚ್ಚಿಸಲಾಗಿದೆ.

ಇನ್ನು  ಪಟಾಕಿ, ಸ್ಫೋಟಕ ವಸ್ತುಗಳು ಅಥವಾ ಅಪಾಯಕಾರಿ ರಾಸಾಯನಿಕಗಳನ್ನು ಮೆಟ್ರೋದಲ್ಲಿ ಸಾಗಿಸುವುದು ಸೇರಿದಂತೆ ಸೆಕ್ಷನ್ 60(1) ಅಡಿಯಲ್ಲಿ ಬರುವ ಪ್ರಕರಣಗಳಿಗೂ ₹2,500 ದಂಡ ವಿಧಿಸಲಾಗುತ್ತದೆ.

ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ, ಈ ದಂಡದ ಮೊತ್ತವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ.10ರಷ್ಟು ಹೆಚ್ಚಿಸಲಾಗುವುದು. ಪ್ರಯಾಣಿಕರ ಸುರಕ್ಷತೆ, ಶಿಸ್ತು ಮತ್ತು ಸಾರ್ವಜನಿಕ ಆಸ್ತಿಯ ಸಂರಕ್ಷಣೆ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

Exit mobile version