ಬೆಂಗಳೂರು, (ಆಗಸ್ಟ್ 8): ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರ ಪತ್ತೆ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 30 ಸ್ಥಳಗಳಲ್ಲಿ ದಾಳಿ ಹಾಗೂ ಪರಿಶೀಲನೆ ಕೈಗೊಳ್ಳಲಾಗಿದೆ.
ವರ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಶೆಡ್‌ಗಳು ಹಾಗೂ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನೂರಕ್ಕೂ ಹೆಚ್ಚು ಶೆಡ್‌ಗಳಿರುವ ಪ್ರದೇಶಗಳಲ್ಲಿಯೂ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿ ವಾಸಿಸುತ್ತಿರುವ ವ್ಯಕ್ತಿಗಳು ಹಾಗೂ ಮಹಿಳೆಯರ ಗುರುತಿನ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಕಾರ್ಯಾಚರಣೆ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಸುಮಾರು 40 ಮಂದಿಯನ್ನು ವಶಕ್ಕೆ ಪಡೆದು ಅವರ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಲಾಗಿದೆ. ಪ್ರಮುಖವಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವ್ಯಕ್ತಿಗಳು ನೀಡಿದ ಮಾಹಿತಿ ಮತ್ತು ದಾಖಲೆಗಳಲ್ಲಿರುವ ವಿವರಗಳು ಪರಸ್ಪರ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಪೊಲೀಸರ ಪ್ರಕಾರ, ದಾಖಲೆಗಳಲ್ಲಿ ಗೊಂದಲ ಕಂಡುಬಂದಿರುವವರು ಅಥವಾ ತಮ್ಮ ವಿಳಾಸ, ಸ್ವಂತ ಊರು ಹಾಗೂ ಇತರ ಮಾಹಿತಿಯ ಬಗ್ಗೆ ಸ್ಪಷ್ಟ ಉತ್ತರ ನೀಡದವರನ್ನು ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಕಾರ್ಯಾಚರಣೆಯ ವೇಳೆ ವ್ಯಕ್ತಿಗಳ ಸ್ವಂತ ಊರು, ಪೋಸ್ಟ್ ಆಫೀಸ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ವಿವರಗಳನ್ನೂ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ. ದಾಖಲೆಗಳಲ್ಲಿರುವ ವಿವರಗಳು ನೈಜವಾಗಿವೆಯೇ ಎಂಬುದನ್ನು ಸಂಬಂಧಪಟ್ಟ ದಾಖಲೆಗಳ ಮೂಲಕ ದೃಢಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಈ ಕುರಿತು ಮಾತಾನಾಡಿ, ಪೊಲೀಸ್ ಕಮಿಷನರ್ ಅವರ ಸೂಚನೆಯ ಮೇರೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ವಿದೇಶಿ ಪ್ರಜೆಗಳು ಪತ್ತೆಯಾದರೆ, ಅವರ ವೀಸಾ, ಪಾಸ್‌ಪೋರ್ಟ್ ಹಾಗೂ ಭಾರತದಲ್ಲಿ ವಾಸಿಸಲು ಅಗತ್ಯವಿರುವ ಇತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ದಾಖಲೆಗಳಲ್ಲಿ ಅನುಮಾನ ಕಂಡುಬಂದಲ್ಲಿ ಹೆಚ್ಚಿನ ಪರಿಶೀಲನೆಗಾಗಿ ಸಂಬಂಧಪಟ್ಟವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನುಬಾಹಿರವಾಗಿ ಭಾರತದಲ್ಲಿ ನೆಲೆಸಿರುವುದು ಅಧಿಕೃತ ಪರಿಶೀಲನೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಕಾನೂನು ಹಾಗೂ ವಲಸೆ ನಿಯಮಗಳ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಹ ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ (ಡಿಪೋರ್ಟ್) ಕ್ರಮವೂ ಕೈಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವೈಟ್‌ಫೀಲ್ಡ್ ವಿಭಾಗದ ವಿವಿಧ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿಯೂ ದಾಖಲೆ ಪರಿಶೀಲನೆ ಹಾಗೂ ಅಗತ್ಯ ತಪಾಸಣೆ ಮುಂದುವರಿಯುವ ಸಾಧ್ಯತೆಯಿದೆ.
