ಬೆಂಗಳೂರಿನಲ್ಲಿ ದುರಂತ: ಗರ್ಭಿಣಿ ಪತ್ನಿಯನ್ನು ಕೊಂದು ಪತಿ ಆ*ತ್ಮಹ*ತ್ಯೆ

Untitled design (74)

ಬೆಂಗಳೂರು (ಜುಲೈ 16): ಇತ್ತೀಚಿನ ದಿನಗಳಲ್ಲಿ ಕೊಲೆ ಆತ್ಯಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಯಾವುದೇ ರೀತಿಯ ಚಿಕ್ಕ ಪುಟ್ಟ ಮನಸ್ತಾಪಗಳು ಕೊಲೆ ಅಥವಾ ಆತ್ಯಹತ್ಯೆಯಲ್ಲಿ ಅಂತ್ಯವಾಗುತ್ತಿರುವುದು ಇತ್ತೀಚಿಗೆ ಅಧಿಕವಾಗಿದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಹತ್ಯೆಗೈದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಮನೋಜ್ (28) ಮತ್ತು ಸ್ವಪ್ನ (26) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ ಪ್ರದೇಶದವರಾದ ಈ ದಂಪತಿ ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗಳು ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೋಜ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ವಪ್ನ ಗೃಹಿಣಿಯಾಗಿದ್ದರು. ಸ್ವಪ್ನ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಮನೋಜ್ ಕೆಲಸಕ್ಕೂ ಹೋಗದೆ ಮನೆಯಲ್ಲೇ ಇದ್ದು, ಈ ಅವಧಿಯಲ್ಲಿ ದಂಪತಿ ನಡುವೆ ಹಲವು ಬಾರಿ ವಾಗ್ವಾದ ನಡೆದಿತ್ತು ಎನ್ನಲಾಗಿದೆ.

ಇಂದು ಮಧ್ಯಾಹ್ನದ ವೇಳೆಯಲ್ಲಿ ಅವರಿಬ್ಬರ ನಡುವೆ ಮನೆಯಲ್ಲಿ ಮತ್ತೊಮ್ಮೆ ಗಲಾಟೆ ನಡೆದಿದ್ದು, ಆ ಸಮಯದಲ್ಲಿ ಸ್ವಪ್ನ ಅವರ ತಾಯಿ ಮನೆಯ ಮೇಲ್ಛಾವಣಿಗೆ ಬಟ್ಟೆ ಒಣಗಿಸಲು ತೆರಳಿದ್ದರು. ಈ ವೇಳೆ ಮನೋಜ್, ಮನೆಯ ಕೋಣೆಯಲ್ಲಿ ನಾಯಿಗೆ ಬಳಸುವ ನೈಲಾನ್ ಬೆಲ್ಟ್‌ನಿಂದ ಸ್ವಪ್ನ ಅವರ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪತ್ನಿಯ ಸಾವಿನ ಬಳಿಕ ಅದೇ ನೈಲಾನ್ ಹಗ್ಗವನ್ನು ಬಳಸಿ ಮನೆಯ ಫ್ಯಾನ್‌ಗೆ ನೇಣು ಬಿಗಿದು ಮನೋಜ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವೇ ಅಥವಾ ಬೇರೆ ಯಾವುದೇ ಹಿನ್ನೆಲೆ ಇದೆಯೇ ಎಂಬುದನ್ನು ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Exit mobile version