ಇಂದಿನಿಂದ ಜಿಬಿಎ ತೆರವು ಕಾರ್ಯಾಚರಣೆ 2.Oಗೆ ಚಾಲನೆ: ಅನಾಥ ವಾಹನಗಳಿಗೆ ಬ್ರೇಕ್!

ಜ್ಞಾನಪೀಠ ಪ್ರಶಸ್ತಿ (2)

ಬೆಂಗಳೂರು, ಜುಲೈ 18: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಬದಿಗಳಲ್ಲಿ ತಿಂಗಳಾನುಗಟ್ಟಲೆ ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಅನಾಥ ಹಾಗೂ ಬಳಕೆಯಲ್ಲದ ವಾಹನಗಳ ವಿರುದ್ಧ ಬೆಂಗಳೂರು ಮಹಾನಗರ ಆಡಳಿತ (GBA) ಇಂದಿನಿಂದ ‘GBA Operation 2.0’ ಕಾರ್ಯಾಚರಣೆಗೆ ಚಾಲನೆ ನೀಡುತ್ತಿದೆ. ನಗರವನ್ನು ಸ್ವಚ್ಛ, ಸುಗಮ ಮತ್ತು ಸಂಚಾರ ಸ್ನೇಹಿಯನ್ನಾಗಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಜುಲೈ 10ರಂದು ಅನಾಥ ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ತಮ್ಮ ವಾಹನಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಆ ಗಡುವು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಇಂದಿನಿಂದ ನಗರದ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುತ್ತದೆ.

ಮೊದಲ ಹಂತದಲ್ಲಿ 500ಕ್ಕೂ ಹೆಚ್ಚು ಅನಾಥ ವಾಹನಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಕಾರ್ಯಾಚರಣೆಯನ್ನು GBA ಹಾಗೂ ನಗರ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ನಡೆಸಲಿದ್ದು, ಬೆಳಗ್ಗೆ 10 ಗಂಟೆಗೆ ಮಲ್ಲೇಶ್ವರದ 4ನೇ ಮುಖ್ಯ ರಸ್ತೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ.

ತೆರವುಗೊಳಿಸಲಾದ ವಾಹನಗಳನ್ನು GBA ಗುರುತಿಸಿರುವ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುತ್ತದೆ. ವಾಹನ ಮಾಲೀಕರು ಬಳಿಕ ಆಗಮಿಸಿದರೆ, ಸಂಚಾರಿ ಪೊಲೀಸರ ವಿಧಿಸಿರುವ ದಂಡ ಹಾಗೂ ಟೋಯಿಂಗ್ ಶುಲ್ಕವನ್ನು ಪಾವತಿಸಿ ತಮ್ಮ ವಾಹನವನ್ನು ವಾಪಸ್ ಪಡೆಯಬಹುದಾಗಿದೆ.

ನಿಗದಿತ ಅವಧಿಯಲ್ಲೂ ಯಾರೂ ವಾಹನಗಳನ್ನು ಪಡೆದುಕೊಳ್ಳದಿದ್ದರೆ, ಸಾರ್ವಜನಿಕ ಪ್ರಕಟಣೆ ನೀಡಿದ ಬಳಿಕ ಉತ್ತಮ ಸ್ಥಿತಿಯಲ್ಲಿರುವ ವಾಹನಗಳನ್ನು ಹರಾಜು ಹಾಕಲಾಗುತ್ತದೆ. ಸಂಪೂರ್ಣ ಹಾಳಾಗಿರುವ ವಾಹನಗಳನ್ನು ನಿಯಮಾನುಸಾರ ಗುಜರಿಗೆ (ಸ್ಕ್ರಾಪ್) ವಿಲೇವಾರಿ ಮಾಡಲಾಗುತ್ತದೆ.

ಈ ಕಾರ್ಯಾಚರಣೆಯಿಂದ ಸಂಗ್ರಹವಾಗುವ ಟೋಯಿಂಗ್ ಶುಲ್ಕ GBA ಬೊಕ್ಕಸಕ್ಕೆ ಸೇರುವುದಾದರೆ, ದಂಡದ ಮೊತ್ತ ನಗರ ಸಂಚಾರಿ ಪೊಲೀಸ್ ಇಲಾಖೆಗೆ ಸೇರುತ್ತದೆ. ಈ ಕುರಿತು ಈಗಾಗಲೇ ಸಂಬಂಧಿತ ಇಲಾಖೆಗಳ ನಡುವೆ ನಿರ್ಧಾರ ಕೈಗೊಳ್ಳಲಾಗಿದೆ.

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ರಸ್ತೆ ಬದಿಯ ಅತಿಕ್ರಮಣ ನಿವಾರಣೆ, ತುರ್ತು ವಾಹನಗಳ ಸಂಚಾರ ಸುಗಮಗೊಳಿಸುವುದು ಹಾಗೂ ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ನಗರ ನಿವಾಸಿಗಳು ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ದೀರ್ಘಕಾಲ ಬಿಟ್ಟು ಹೋಗದಂತೆ ಹಾಗೂ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Exit mobile version