ಬೆಂಗಳೂರಿನ KFC ಕಿಚನ್‌ಗೆ ಅಧಿಕಾರಿಗಳ ದಾಳಿ; ಎಕ್ಸ್‌ಪೈರಿ ಸಾಸ್ ಬಳಕೆ ಪತ್ತೆ!

ಬೆಂಗಳೂರು (ಆಗಸ್ಟ್‌ 8):  ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆಗಾಗಿ ಬೆಂಗಳೂರು ಬ್ರಿಗೇಡ್ ರೋಡ್‌ನಲ್ಲಿರುವ KFC ಕಿಚನ್‌ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಟರ್, ಸಾಸ್, ಬನ್ಸ್, ಫ್ರೋಜನ್ ಚಿಕನ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಅವಧಿ ಮೀರಿದ ಸಾಸ್‌ ನ್ನು ಚಿಕನ್‌ ಗೆ ಉಪಯೋಗಿಸುತ್ತಿರುವುದು ಕಂಡು ಬಂದಿದೆ.

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕಿಚನ್‌ನಲ್ಲಿ ಬಳಸಲಾಗುತ್ತಿರುವ ಆಹಾರ ಸಾಮಗ್ರಿಗಳ ಗುಣಮಟ್ಟ, ಅವುಗಳ ಪ್ಯಾಕಿಂಗ್ ಹಾಗೂ ಅವಧಿಯನ್ನು ಪರಿಶೀಲಿಸಿದ್ದಾರೆ. ಫುಡ್ ಐಟಂಗಳನ್ನು ತಯಾರಿಸಲು ತಾಜಾ ಸಾಮಗ್ರಿಗಳನ್ನು ಬಳಸಲಾಗುತ್ತಿದೆಯೇ, ಸಂಗ್ರಹಿಸಿರುವ ಆಹಾರ ಪದಾರ್ಥಗಳ ಎಕ್ಸ್‌ಪೈರಿ ದಿನಾಂಕ ಸರಿಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು.

ವಿಶೇಷವಾಗಿ ಸಾಸ್‌ಗಳ ಮೇಲೆ ಸರಿಯಾದ ಲೇಬಲ್ ಇಲ್ಲದಿರುವ ಬಗ್ಗೆ ಅಧಿಕಾರಿಗಳು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಯಾವುದೇ ಆಹಾರ ಪದಾರ್ಥ ಅಥವಾ ಸಾಸ್‌ ಅನ್ನು ಬಳಸುವಾಗ ಅದರ ಮೇಲೆ ಯಾವ ಬ್ರ್ಯಾಂಡ್‌ನ ಉತ್ಪನ್ನ, ಯಾವೆಲ್ಲ ಸಾಮಗ್ರಿಗಳು ಒಳಗೊಂಡಿವೆ ಎಂಬ ಮಾಹಿತಿ ಸ್ಪಷ್ಟವಾಗಿ ನಮೂದಿಸಿರುವ ಲೇಬಲ್ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಅಡುಗೆ ಮನೆಯಲ್ಲಿ ಬಳಸಲಾಗುತ್ತಿರುವ ಅಡುಗೆ ಎಣ್ಣೆಯ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಯಾವ ಬ್ರ್ಯಾಂಡ್‌ನ ಎಣ್ಣೆಯನ್ನು ಬಳಸಲಾಗುತ್ತಿದೆ, ಅದನ್ನು ಎಷ್ಟು ಬಾರಿ ಬಳಸಲಾಗುತ್ತಿದೆ ಹಾಗೂ ಬಳಕೆಯ ನಂತರ ಅದರ ಗುಣಮಟ್ಟವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗಿದೆ.

ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘನೆಯ ಸ್ವರೂಪಕ್ಕೆ ಅನುಗುಣವಾಗಿ ₹5 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರ ಉಲ್ಲಂಘನೆಗಳು ಕಂಡುಬಂದರೆ ಕಾನೂನು ಪ್ರಕಾರ ಇತರ ಕ್ರಮಗಳನ್ನೂ ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಪರಿಶೀಲನೆ ವೇಳೆ ಸಂಗ್ರಹಿಸಲಾದ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಾದರಿಗಳ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳ ಕುರಿತು ವರದಿ ಸುಮಾರು 15 ದಿನಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಆಹಾರ ಸುರಕ್ಷತಾ ಇಲಾಖೆ ಈಗಾಗಲೇ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದು, ಸುಮಾರು 30 ಕಡೆಗಳಲ್ಲಿ ದಾಳಿ ಹಾಗೂ ತಪಾಸಣೆ ನಡೆಸಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ. ನಿನ್ನೆಯ ಕಾರ್ಯಾಚರಣೆಯಲ್ಲಿ 35 ಆಹಾರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇಂದೂ 30ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಆಹಾರ ಮಳಿಗೆಗಳು ಹಾಗೂ ರೆಸ್ಟೋರೆಂಟ್‌ಗಳು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗ್ರಾಹಕರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದಂತೆ ಆಹಾರ ಪದಾರ್ಥಗಳ ಗುಣಮಟ್ಟ, ಲೇಬಲಿಂಗ್, ಸಂಗ್ರಹಣೆ ಮತ್ತು ಅಡುಗೆ ಎಣ್ಣೆಯ ಬಳಕೆಯಲ್ಲಿ ನಿಯಮಗಳನ್ನು ಪಾಲಿಸುವಂತೆ ಇಲಾಖೆ ಸೂಚಿಸಿದೆ.

Exit mobile version