ಬೆಂಗಳೂರು ಆ 29: ಬೆಂಗಳೂರು–ಹೊಸೂರು ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ನೆರಳೂರು ಸಮೀಪ ನಡೆದಿದೆ. ಕಾರಿನ ಎಂಜಿನ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬಳಿಕ ಕಾರಿನಿಂದ ಹೊರಗೆ ಬಂದಿರುವುದರಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟರೂ, ಬೆಂಕಿ ಕ್ಷಣಕ್ಷಣಕ್ಕೂ ವೇಗವಾಗಿ ವ್ಯಾಪಿಸಿಕೊಂಡಿದೆ. ಪರಿಣಾಮ ಕಾರಿನ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಘಟನೆಯಿಂದ ಬೆಂಗಳೂರು–ಹೊಸೂರು ಮುಖ್ಯರಸ್ತೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕೆಲಕಾಲ ಆತಂಕಕ್ಕೊಳಗಾದರು.
ವಿಷಯ ತಿಳಿದು ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ಮುಂದುವರಿದಿದೆ.
ಚಲಿಸುತ್ತಿದ್ದ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದ್ದು, ವಾಹನಗಳ ಎಂಜಿನ್ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
