ಕನ್ನಡ ಭುವನೇಶ್ವರಿಯನ್ನೇ ಒಪ್ಪದ ಬಾನು, ಚಾಮುಂಡೇಶ್ವರಿಯ ದಸರಾ ಉದ್ಘಾಟಿಸುತ್ತಾರಾ?

Untitled design 2025 08 25t125304.880

ದಸರಾ 2025ರ ಉದ್ಘಾಟನೆಗೆ ಕರ್ನಾಟಕ ಸರ್ಕಾರವು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ನಿರ್ಧಾರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಆಯ್ಕೆಯು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆದರೆ, ಬಿಜೆಪಿ ಮುಖಂಡರಾದ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ದಸರಾವು ಜಾತ್ಯಾತೀತ ಕಾರ್ಯಕ್ರಮವಲ್ಲ, ಬದಲಿಗೆ ಚಾಮುಂಡೇಶ್ವರಿಯ ಭಕ್ತಿಯಿಂದ ಕೂಡಿದ ಧಾರ್ಮಿಕ ಆಚರಣೆ ಎಂದು ಇವರು ವಾದಿಸಿದ್ದಾರೆ.

ಈ ವಿವಾದಕ್ಕೆ ಇಂಬು ನೀಡಿರುವುದು 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಅವರು ಮಾಡಿದ ಭಾಷಣದ ವಿಡಿಯೋ, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಭಾಷಣದಲ್ಲಿ ಅವರು ಕನ್ನಡ ಭಾಷೆಯನ್ನು ಭುವನೇಶ್ವರಿಯಾಗಿ ಚಿತ್ರಿಸಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ.

“ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ. ಕೆಂಪು ಮತ್ತು ಹಳದಿ, ಅರಿಶಿನ-ಕುಂಕುಮದ ಬಾವುಟ ಹಾಕಿ, ಅರಿಶಿನ-ಕುಂಕುಮ ಲೇಪಿಸಿ ಭುವನೇಶ್ವರಿಯಾಗಿ ಆಸನದ ಮೇಲೆ ಕೂರಿಸಿಬಿಟ್ಟಿರಿ. ನಾನೆಲ್ಲಿ ನಿಲ್ಲಬೇಕು? ನಾನೇನನ್ನು ನೋಡಲಿ? ನಾನೆಲ್ಲಿ ತೊಡಗಿಕೊಳ್ಳಬೇಕು? ನನ್ನನ್ನು ಹೊರಗಟ್ಟುವಿಕೆ ಇಂದಿನಿಂದಲ್ಲ, ಎಂದಿನಿಂದಲೋ ಆರಂಭವಾಗಿತ್ತು,” ಎಂದು ಅವರು ಪ್ರಶ್ನಿಸಿದ್ದಾರೆ.

ಅವರು ಮುಂದುವರೆದು, “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ ಎಂಬ ಶ್ಲೋಕವಿದೆ. ಮಹಿಳೆಯನ್ನು ಆಸನದ ಮೇಲೆ ಕೂರಿಸಿದಾಕ್ಷಣ ದೇವತೆಗಳು ಸಂತುಷ್ಟರಾಗುವುದಿಲ್ಲ. ಕನ್ನಡ ಭಾಷೆಯ ಮೇಲೆಯೂ ದೌರ್ಜನ್ಯ ಮಾಡುತ್ತಿದ್ದೀರಿ. ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ, ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆಯನ್ನು ಮಾಡಿ, ನನ್ನನ್ನು ಹೊರಗಟ್ಟಲು ಇಷ್ಟೊಂದು ಹುನ್ನಾರ ಬೇಕಿತ್ತಾ?” ಎಂದು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ.

ಈ ಹೇಳಿಕೆಯಿಂದಾಗಿ, “ಕನ್ನಡ ಭುವನೇಶ್ವರಿಯನ್ನೇ ಒಪ್ಪದ ಬಾನು ಮುಷ್ತಾಕ್, ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ದಸರಾವನ್ನು ಉದ್ಘಾಟಿಸುತ್ತಾರೆಯೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.

Exit mobile version