ಬಂಡೀಪುರದಲ್ಲಿ ಹುಲಿಗಳ ಕಾದಾಟದಲ್ಲಿ ಗಾಯಗೊಂಡ ವ್ಯಾಘ್ರ, ಮೈಸೂರಿಗೆ ರವಾನೆ!

1 (45)

ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಕುಂದಕೆರೆ ವಲಯದ ಹೆಗ್ಗವಾಡಿ ರಸ್ತೆಯಲ್ಲಿ ಇಂದು (ಆಗಸ್ಟ್ 15) ಹಾಡಹಗಲೇ ಎರಡು ಹುಲಿಗಳ ನಡುವೆ ಗಡಿ ವಿಚಾರಕ್ಕೆ ತೀವ್ರ ಕಾದಾಟ ನಡೆದಿದೆ. ಈ ಕಾದಾಟದಲ್ಲಿ ಸುಮಾರು 11 ವರ್ಷದ ಗಂಡು ಹುಲಿಯೊಂದು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡು ಜಮೀನಿನಲ್ಲಿ ಬಿದ್ದಿದೆ.

ಕುಂದಕೆರೆ ಗ್ರಾಮದ ರೈತ ಮಹದೇವ್‌ನ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಕಾದಾಟದಲ್ಲಿ ಗಾಯಗೊಂಡ ಹುಲಿಯ ಕಾಲು, ಮುಖ ಮತ್ತು ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ರೈತರು ಗಾಯಾಳು ಹುಲಿಯನ್ನು ಕಂಡು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕುಂದಕೆರೆ ವಲಯದ ಅರಣ್ಯಾಧಿಕಾರಿ ನಾಗೇಂದ್ರನಾಯಕ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ, ಹುಲಿಯ ಸ್ಥಿತಿಯನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿತು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮತ್ತು ಎಸಿಎಫ್ ಸುರೇಶ್ ತಕ್ಷಣ ಸ್ಥಳಕ್ಕೆ ಆಗಮಿಸಿ, ಪಶುವೈದ್ಯ ಡಾ. ವಾಸೀಂ ಮಿರ್ಜಾರನ್ನು ಕರೆತಂದರು. ನಿತ್ರಾಣಗೊಂಡಿರುವ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ, ಸೆರೆಹಿಡಿದು ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಯಿತು.

ಮತ್ತೊಂದು ಹುಲಿಯ ಸೆರೆಗೆ ಒತ್ತಾಯ:

ಕಾದಾಟದಲ್ಲಿ ಭಾಗಿಯಾಗಿದ್ದ ಮತ್ತೊಂದು ಹುಲಿ, ಸುಮಾರು 8 ವರ್ಷದ ದಷ್ಟಪುಷ್ಟವಾದ ಗಂಡು ಹುಲಿಯಾಗಿದ್ದು, ಸ್ಥಳದಿಂದ ಪರಾರಿಯಾಗಿದೆ. ಸ್ಥಳೀಯ ರೈತರು ಈ ಹುಲಿಯನ್ನು ಸೆರೆಹಿಡಿಯದೆ ಗಾಯಾಳು ಹುಲಿಯನ್ನು ರವಾನಿಸಬಾರದೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿ ಎರಡನೇ ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದರಂತೆ ಕುನ್ನಮುಟ್ಟಿ ಗುಡ್ಡದಲ್ಲಿ ಅರಣ್ಯ ಇಲಾಖೆಯಿಂದ ಸೆರೆ ಕಾರ್ಯಾಚರಣೆ ಶುರುವಾಗಿದೆ.

ಗಾಯಾಳು ಹುಲಿಯ ಸುದ್ದಿ ತಿಳಿದು ಹೆಗ್ಗವಾಡಿ, ಕುಂದಕೆರೆ, ಯರಿಯೂರು, ಚಿರಕನಹಳ್ಳಿ, ವಡ್ಡಗೆರೆ ಸೇರಿದಂತೆ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಜನರು ಹುಲಿಯನ್ನು ನೋಡಲು ಧಾವಿಸಿದರು. ಕೆಲವರು ಫೋಟೋಗಳನ್ನು ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತೆರಕಣಾಂಬಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ಮತ್ತು ಸಬ್ ಇನ್ಸ್‌ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Exit mobile version