ರಿಷಬ್ ಶೆಟ್ಟಿಯ ಕಾಂತಾರ-1 ಚಿತ್ರ ನೋಡಿ ಕೊಂಡಾಡಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ಬಾಲಿವುಡ್ ಸಿನಿಮಾವೊಂದರ ಟ್ರೈಲರ್ ಲಾಂಚ್ ಮಾಡಿದ್ದಾರೆ. ಯೆಸ್.. ಮೇಜರ್ ಶೈತಾನ್ ಸಿಂಗ್ ಭಾಟಿ & ಟೀಂ ಮಾಡಿದ ಇಂಡೋ-ಚೈನಾ ವಾರ್ ಕುರಿತ ಈ ಸಿನಿಮಾಗೆ ರಾಕಿಭಾಯ್ ಸಾಥ್ ಸಿಕ್ಕಿರೋದು ಇಂಟ್ರೆಸ್ಟಿಂಗ್.
ಫರಾನ್ ಅಖ್ತರ್‌ಗೆ ಯಶ್ ಬಲ.. ‘ಬಹದ್ದೂರ್’ ರಾಕಿಂಗ್..!
ರೆಝಾಂಗ್ ಲಾ ಕದನ.. ಗಾಯಗೊಂಡು ಹೋರಾಡಿದ ವೀರ
ಇದು ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಇಂದು ಲಾಂಚ್ ಮಾಡಿದ 120 ಬಹದ್ದೂರ್ ಅನ್ನೋ ಬಾಲಿವುಡ್ ಸಿನಿಮಾದ ಟ್ರೈಲರ್ ಝಲಕ್. ನೈಜ ಘಟನೆ ಆಧಾರಿತ ಪೇಟ್ರಿಯಾಟಿಕ್ ಮೂವಿ ಇದಾಗಿದ್ದು, ಇತಿಹಾಸದ ಪುಟಗಳಲ್ಲಿ ರಾರಾಜಿಸಿದಂತಹ ವೀರ ಯೋಧ ಹಾಗೂ ಆತನ ಸಹಚರರ ಕುರಿತ ಕಥೆಯಾಗಿದೆ. ಹಾಗಾಗಿಯೇ ಯಶ್ ಇದನ್ನ ಲಾಂಚ್ ಮಾಡಿ, ದೇಶಪ್ರೇಮದ ಕಿಚ್ಚ ಹೊತ್ತಿಸೋ ಅಂತಹ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಕಾಂತಾರ-1 ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಯಶ್, ಇದೇ ಮೊದಲ ಬಾರಿ ಬಾಲಿವುಡ್ ಸ್ಟಾರ್ ಮೂವಿಯ ಟ್ರೈಲರ್ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ 120 ಬಹದ್ದೂರ್ ಸಿನಿಮಾ, 1962ರಲ್ಲಿ ಇಂಡೋ-ಚೈನಾ ಯೋಧರ ನಡುವೆ ಲಡಾಖ್‌ನ ರೆಝಾಂಗ್ ಲಾದಲ್ಲಿ ನಡೆದ ಕದನದ ಕುರಿತಾದ ನೈಜ ಘಟನೆ ಆಧರಿಸಿ ತಯಾರಾಗಿದೆ. ಸಮುದ್ರ ಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರದ ರೆಝಾಂಗ್ ಲಾದಲ್ಲಿ 3 ಸಾವಿರ ಮಂದಿ ಪ್ರಬಲ ಚೀನೀ ತುಕಡಿಯನ್ನ ಎದುರಿಸಿದಂತಹ 120 ಮಂದಿ ಭಾರತದ ಯೋಧರ ಕುರಿತ ಕಥೆ ಇದು. ಇಲ್ಲಿ ಮೇಜರ್ ಶೈತಾನ್ ಸಿಂಗ್ ಭಾಟಿ, ಗಾಯಗೊಂಡರೂ ಸಹ ಹಿಂದಿರುಗದೆ, ಕೊನೆಯ ಉಸಿರು ಇರುವವರೆಗೂ ಹಿಂದೆ ನೋಡುವ ಮಾತೇ ಇಲ್ಲ ಅಂತ ಶತ್ರುಗಳನ್ನ ಹಿಮ್ಮೆಟ್ಟಿದ್ದರು. ಆ ಶೈತಾನ್ ಸಿಂಗ್ ಭಾಟಿಯಾಗಿ ಫರಾನ್ ಅಖ್ತರ್ ನಟಿಸಿದ್ದು, ಟ್ರೈಲರ್ ನೋಡುಗರ ರಕ್ತ ಕುದಿಯುವಂತೆ ಮಾಡ್ತಿದೆ.
ಲಡಾಖ್‌ನ 18 ಸಾವಿರ ಅಡಿ ಎತ್ತರ.. ಇಂಡೋ-ಚೈನಾ ವಾರ್
3000 ಚೀನೀ ತುಕಡಿಯನ್ನ ಎದುರಿಸಿದ 120 ಯೋಧರ ಕಥೆ
ಶೈತಾನ್ ಸಿಂಗ್ ಸೇರಿದಂತೆ ಸುಮಾರಿ 8 ಮಂದಿ ಪರಮವೀರ ಚಕ್ರ, ಮತ್ತಷ್ಟು ಮಂದಿ ಯೋಧರು ಗ್ಯಾಲಂಟರಿ ಅವಾರ್ಡ್, ಒಂದು ಸೇವಾ ಮೆಡಲ್ ಹಾಗೂ 4 ಸೇನಾ ಮೆಡಲ್ ಪಡೆಯುತ್ತಾರೆ. 37ನೇ ವಯಸ್ಸಿಗೆ ದೇಶಕ್ಕಾಗಿ ಮಡಿದ ರಾಜಸ್ತಾನದ ಜೋಧ್‌ಪುರದ ವೀರ ಯೋಧನ ಕುರಿತ 120 ಬಹದ್ದೂರ್ ಸಿನಿಮಾ, ಇದೇ ನವೆಂಬರ್ 21ಕ್ಕೆ ತೆರೆಗೆ ಬರ್ತಿದೆ. ರಾಶಿ ಖನ್ನಾ ಕೂಡ ನಟಿಸಿರೋ ಈ ಚಿತ್ರಕ್ಕೆ ರಜನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳಿದ್ದಾರೆ.





