ಜೀ ಕನ್ನಡ ವಾಹಿನಿ ತನ್ನ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್‌ನ ಹೊಸ ಸೀಸನ್ ಪ್ರೇಕ್ಷಕರಿಗೆ ಸಿದ್ಧವಾಗುತ್ತಿದೆ ಎಂಬ ಸಿಹಿಸುದ್ದಿ ನೀಡಿದೆ. ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಕಾರ್ಯಕ್ರಮದ 6ನೇ ಸೀಸನ್ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಕಾರ್ಯಕ್ರಮದ ಹಿಂದಿನ 5 ಸೀಸನ್‌ಗಳು ಯಶಸ್ವಿಯಾಗಿ ಜನರ ಮನ ತಲುಪಿದ್ದು, ಪ್ರೇಕ್ಷಕರು ಹೊಸ ಸೀಸನ್‌ಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಇತ್ತೀಚಿಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ಗ್ರ್ಯಾಂಡ್ ವೇದಿಕೆಯಲ್ಲಿ ಚರ್ಚೆಯಾಗಿದೆ. ಕಾರ್ಯಕ್ರದಲ್ಲಿ ರಿಷಬ್ ಶೆಟ್ಟಿ ಸಹ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ರಮೇಶ್ ಅರವಿಂದ್, ರಿಷಬ್ ಶೆಟ್ಟಿ ಅವರನ್ನು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಚೇರ್‌ನಲ್ಲಿ ಕೂರಿಸಿ, ಇತ್ತೀಚಿಗೆ ಬಿಡುಗಡೆಯಾದ ಕಾಂತಾರ-1 ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿರುವ ವಿಡೆಯೋ ಎಲ್ಲೆಡೆ ವೈರಲ್ ಆಗಿದೆ. ಹೀಗಾಗಿ ಪ್ರೇಕ್ಷಕರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಹೊಸ ಸೀಸನ್‌ಗೆ ಕಾತುರದಿಂದ ಕಾಯುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ನೋಡಿದ ಪ್ರೇಕ್ಷಕರು ವೀಕೆಂಡ್ ವಿತ್ ರಮೇಶ್ ಶೋ ಹೊಸ ಸೀಸನ್ ಅರಂಭವಾಗತ್ತೆಯೇ ? ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಅನೇಕರು ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್-1’ ಚಿತ್ರದ ಯಶಸ್ಸಿನ ನಡುವೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿಯಾಗಲೇ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮವು ಉತ್ತಮ ರೇಟಿಂಗ್ ಹಾಗೂ ಯಾವುದೇ ವಯಸ್ಸಿನ ಮಿತಿ ಇಲ್ಲದೇ ಪ್ರತಿಯೊಬ್ಬರು ನೋಡಬಹುದಾದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್, ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಆತ್ಮೀಯ ಸಂವಾದ ನಡೆಸುವುದು ವಿಶೇಷ. ರಮೇಶ್ ಅರವಿಂದ್ ಅವರ ನಿರೂಪಣಾ ಶೈಲಿ ಮತ್ತು ಅತಿಥಿಗಳೊಂದಿಗೆ ಮಾತನಾಡುವ ರೀತಿ ಪ್ರೇಕ್ಷಕರ ಮನ ಮುಟ್ಟಿದೆ.
ಜೀ ಕನ್ನಡ ವಾಹಿನಿಯ ವೇದಿಕೆಯಲ್ಲಿ ಈ ದೃಶ್ಯವನ್ನು ತೋರಿಸಿದ್ದರಿಂದ, ರಮೇಶ್ ಅರವಿಂದ್ ಮತ್ತೆ ತಮ್ಮ ಅದ್ಭುತ ನಿರೂಪಣೆಯೊಂದಿಗೆ ಸಾಧಕರ ಸಾಧನೆಯನ್ನು ಅನಾವರಣಗೊಳಿಸಲು ಬರುತ್ತಿದ್ದಾರೆಯೇ ಎಂಬ ಬಗ್ಗೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಕಾರ್ಯಕ್ರಮದ ಹೊಸ ಸೀಸನ್ ಶೀಘ್ರದಲ್ಲೇ ಪ್ರಸಾರವಾಗುವುದರೊಂದಿಗೆ, ಕನ್ನಡ ಮನರಂಜನಾ ವಲಯದಲ್ಲಿ ಹೊಸ ಚೈತನ್ಯ ಬಂದಿರುವುದು ಖಚಿತ.
