ಕಿರುತೆರೆ ನಟಿ ಮತ್ತು ನಿರ್ದೇಶಕಿ ಎಂದು ಪರಿಚಿತರಾದ ವಿಸ್ಮಯ ಗೌಡ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಹಿಮಾನ್ವಿ ಎಂಬ ಮಹಿಳೆ ದೂರು ಸಲ್ಲಿಸಿದ್ದು, ಈ ಬಗ್ಗೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಹಣಕಾಸು ವಹಿವಾಟಿನ ವಿವರ:
2019ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಹಿಮಾನ್ವಿ ಮತ್ತು ವಿಸ್ಮಯ ಗೌಡರ ನಡುವೆ ಸ್ನೇಹ ಬೆಳೆಯಿತು. ಫೆಬ್ರವರಿ 2024ರಲ್ಲಿ, ವಿಸ್ಮಯ ತನ್ನ ಹಣಕಾಸು ತೊಂದರೆಗಳನ್ನು ಹೇಳಿ ಹಿಮಾನ್ವಿಯಿಂದ ₹6.5 ಲಕ್ಷ ಸಾಲವನ್ನು ಪಡೆದರು. ಹಿಮಾನ್ವಿ ತನ್ನ ತಾಯಿಯ ಖಾತೆ ಮತ್ತು ಉಳಿತಾಯದಿಂದ ₹5 ಲಕ್ಷ ಮತ್ತು ₹1.5 ಲಕ್ಷ ನೀಡಿದ್ದಳು. ವಿಸ್ಮಯ ಪೋಸ್ಟ್-ಡೇಟೆಡ್ ಚೆಕ್ ನೀಡಿದ್ದರೂ, ಸಹಿ ತಪ್ಪಾಗಿದ್ದ ಕಾರಣ ಚೆಕ್ ಬೌನ್ಸ್ ಆಯಿತು. ಹಣವನ್ನು ಮರಳಿಸುವಂತೆ ಕೇಳಿದಾಗ ವಿಸ್ಮಯ ಬೆದರಿಕೆ ಹಾಕಿದ್ದಾರೆಂದು ದೂರಿದ್ದಾರೆ ಹಿಮಾನ್ವಿ.
ಕಾನೂನು ಕ್ರಮ:
ನ್ಯಾಯಾಲಯವು ಈ ಪ್ರಕರಣದ ತನಿಖೆಗೆ ಆದೇಶಿಸಿದ ನಂತರ ಪೊಲೀಸರು IPC 420 (ವಂಚನೆ) ಸೇರಿದಂತೆ ಸಾಲ ವಂಚನೆ ಮತ್ತು ಬೆದರಿಕೆಗೆ ಸಂಬಂಧಿಸಿದ ಎಫ್ಐಆರ್ ದಾಖಲಿಸಿದ್ದಾರೆ. ವಿಸ್ಮಯರ ವಿರುದ್ಧದ ತನಿಖೆ ಮುಂದುವರೆದಿದೆ.
ವಿಸ್ಮಯ ಗೌಡರ ಪ್ರತಿಕ್ರಿಯೆ:
ಇನ್ಸ್ಟಾಗ್ರಾಂ ನಲ್ಲಿ ಹಿಮಾನ್ವಿ ವಿರುದ್ಧ ಪೋಸ್ಟ್ ಹಂಚಿಕೊಂಡಿರುವ ವಿಸ್ಮಯ ಗೌಡ, ಹಿಮಾನ್ವಿ ಒಬ್ಬ ವಂಚಕಿ, ಆಕೆಯ ವಿರುದ್ಧ ನಾನು ಕೇಸು ದಾಖಲಿಸಿದ್ದೆ. ಕೇಸಿನಲ್ಲಿ ನನಗೆ ಜಯ ದೊರೆತಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಹಿಮಾನ್ವಿ ನಡೆಸುತ್ತಿದ್ದ ಕಾಸ್ಮೆಟಿಕ್ ಕ್ಲಿನಿಕ್ ವಿರುದ್ಧ ತಾವು ಕೇಸು ದಾಖಲಿಸಿದ್ದಾಗಿ ಹೇಳಿರುವ ವಿಸ್ಮಯ ಗೌಡ, ಇಲಾಖೆಯು ಹಿಮಾನ್ವಿಗೆ ನೊಟೀಸ್ ನೀಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯದಲ್ಲಿ ವಿವಾದ:
ವಿಸ್ಮಯ ಗೌಡ ಅವರ ಐಷಾರಾಮಿ ಜೀವನಶೈಲಿಯ ಬಗ್ಗೆ ವಿಸ್ಮಯಗೌಡ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿದ್ದರು. ‘ಡಿಯರ್ ಕಣ್ಮಣಿ’ ಸಿನಿಮಾ ಮಾಡಲು ಅವರು ಮುಂದಾಗಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಮ್ಯಾನಿಫೆಸ್ಟೇಷನ್ ಕೋಚಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ವಿಸ್ಮಯ ಈಗ ವಂಚನೆ ಪ್ರಕರಣದ ಆರೋಪಿ ಆಗಿದ್ದಾರೆ.