ಕೆಲವೊಮ್ಮೆ ಅದೃಷ್ಟ ಎಂಬುದು ರಾತ್ರೋರಾತ್ರಿ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಹೇಳೋದಕ್ಕಾಗಲ್ಲ ಅದಕ್ಕೆ ಮೊನಾಲಿಸಾ ಭೋಸ್ಲೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತನ್ನ ಅಪ್ರತಿಮ ಕಣ್ಣಿನ ಅಂದದಿಂದಲೇ ನೆಟ್ಟಿಗರ ಮನಗೆದ್ದ ಈಕೆ, ಇಂದು ಮಣಿ ಸರ ಬಿಟ್ಟು, ಶೂಟಿಂಗ್‌ಗಳಲ್ಲಿ ಬ್ಯೂಸಿ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳ ಶಕ್ತಿಯಿಂದಾಗಿ ಇಂದು ಮೊನಾಲಿಸಾ ಹೋದ ಕಡೆಯಲ್ಲೆಲ್ಲಾ ಅಭಿಮಾನಿಗಳ ದಂಡೇ ನೆರೆಯುತ್ತಿದೆ.
ಮೊನಾಲಿಸಾ ಅವರ ಈ ಜನಪ್ರಿಯತೆಯನ್ನು ಗುರುತಿಸಿದ ಚಿತ್ರರಂಗ ಅವರಿಗೆ ರೆಡ್ ಕಾರ್ಪೆಟ್‌ನೊಂದಿಗೆ ಚಿತ್ರರಂಗಕ್ಕೆ ಸ್ವಾಗತ ಮಾಡಿದೆ. ಈಗಾಗಲೇ ಅವರು ‘ಸಾದಗಿ’ ಎಂಬ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಜೂನ್‌ನಲ್ಲಿ ಬಿಡುಗಡೆಯಾದ ಈ ಹಾಡು ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಈಗ ಅವರ ಹೊಸ ಆಲ್ಬಂ ಸಾಂಗ್ ‘ದಿಲ್ ಜಾನಿಯಾ’ ಬಿಡುಗಡೆಯಾಗಿದ್ದು, ಮತ್ತೊಮ್ಮೆ ನೆಟ್ಟಿಗರು ಈ ನೀಲಿ ಕಣ್ಣಿನ ಸುಂದರಿಯ ಅಭಿನಯಕ್ಕೆ ಫಿದಾ ಆಗಿದ್ದಾರೆ.
ಮೊನಾಲಿಸಾ ಅವರ ಪ್ರತಿಭೆ ಕೇವಲ ಆಲ್ಬಂ ಸಾಂಗ್‌ಗಳಿಗೆ ಸೀಮಿತವಾಗಿಲ್ಲ. ಸನೋಜ್ ಮಿಶ್ರಾ ನಿರ್ದೇಶನದ ‘ದಿ ಡೈರಿ ಆಫ್ ಮಣಿಪುರ್’ ಎಂಬ ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ. ಇದಲ್ಲದೆ, ದಕ್ಷಿಣ ಭಾರತದ ಚಿತ್ರರಂಗವೂ ಇವರತ್ತ ಮುಖ ಮಾಡಿದ್ದು, ಮಲಯಾಳಂನ ಬಹುನಿರೀಕ್ಷಿತ ‘ನಾಗಮ್ಮ’ ಚಿತ್ರಕ್ಕೂ ಮೊನಾಲಿಸಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಡ ಕುಟುಂಬದಿಂದ ಬಂದ ಹುಡುಗಿಯೊಬ್ಬಳು ಇಂದು ಬಾಲಿವುಡ್ ಮತ್ತು ಮಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಸೋಶಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಅವರ ಬೆಳವಣಿಗೆಯ ಬಗ್ಗೆ ಪಾಸಿಟಿವ್ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಬಡವರ ಮಕ್ಕಳು ಬೆಳೆಯಬೇಕು ಎಂಬುದಕ್ಕೆ ಇವರೇ ಸಾಕ್ಷಿ ಎಂದು ಕೆಲವರು ಹೇಳುತ್ತಿದ್ದರೆ, ಅಭಿನಯ ಮತ್ತು ಮುಖಭಾವದಲ್ಲಿ ಇವರು ಯಾವುದೇ ಬಾಲಿವುಡ್ ನಾಯಕಿಯರಿಗಿಂತ ಕಡಿಮೆ ಇಲ್ಲ ಎಂದು ಅಭಿಮಾನಿಗಳು ಪ್ರಶಂಸಿಸುತ್ತಿದ್ದಾರೆ.
ಸದ್ಯ ಸದ್ದು ಮಾಡುತ್ತಿರುವ ‘ದಿಲ್ ಜಾನಿಯಾ’ ಹಾಡಿನಲ್ಲಿ ಸಮರ್ಥ್ ಮೆಹ್ತಾ ಅವರು ಮೊನಾಲಿಸಾ ಅವರ ಪ್ರಿಯಕರನಾಗಿ ನಟಿಸಿದ್ದಾರೆ. ರಿಧಮ್ ಸಂಧ್ಯಾ ನಿರ್ದೇಶನದ ಈ ಹಾಡಿಗೆ ಹನಿಮನಿ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ. ರಾಜಾ ಹರ್ಭಜನ್ ಸಿಂಗ್ ಅವರ ಸಂಗೀತ ಮತ್ತು ಗಗನ್‌ದೀಪ್ ಅವರ ಸಾಹಿತ್ಯ ಈ ಹಾಡಿನ ಯಶಸ್ಸಿಗೆ ಕಾರಣವಾಗಿದೆ. ಒಟ್ಟಾರೆಯಾಗಿ, ಕುಂಭಮೇಳದ ಆ ಸಾಮಾನ್ಯ ಹುಡುಗಿ ಇಂದು ದೊಡ್ಡ ಮಟ್ಟದ ತಾರೆಯಾಗಿ ಬೆಳೆಯುತ್ತಿರುವುದು ಸಿನಿರಂಗದ ಕುತೂಹಲಕ್ಕೆ ಕಾರಣವಾಗಿದೆ.
