ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

Your paragraph text (1)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಆಗಮಿಸಿದ್ದಾರೆ. ಇಂದು ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬವಾಗಿದ್ದು, ಈ ವಿಶೇಷ ದಿನದಂದು ಪತಿಯನ್ನು ಭೇಟಿಯಾಗಲು ಬಂದಿದ್ದಾರೆ.

ಬೆಳಿಗ್ಗೆ ವಿಜಯಲಕ್ಷ್ಮಿ ಅವರು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಸ್ಥಾನದ ಪ್ರಸಾದವನ್ನು ಪಡೆದುಕೊಂಡು ಪತಿ ದರ್ಶನ್ ಅವರಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಪ್ರಸಾದದ ಜೊತೆಗೆ ಹಣ್ಣು-ಹಂಪಲುಗಳನ್ನೂ ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಹುಟ್ಟುಹಬ್ಬದ ದಿನದಂದು ಪತಿಯ ಭೇಟಿಗೆ ಆಗಮಿಸಿರುವ ವಿಜಯಲಕ್ಷ್ಮಿ, ದರ್ಶನ್ ಅವರ ಆಶೀರ್ವಾದ ಪಡೆಯಲಿದ್ದಾರೆ. 

ಜೈಲಿನಲ್ಲೇ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ

ಇನ್ನೊಂದೆಡೆ, ದರ್ಶನ್ ಅವರ ಆರೋಗ್ಯದ ವಿಚಾರವೂ ಚರ್ಚೆಯಲ್ಲಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ನ್ಯಾಯಾಲಯದ ನಿರ್ದೇಶನದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.

ಜೈಲಾಧಿಕಾರಿಗಳು ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ಸಂಜಯ್ ಗಾಂಧಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞ ವೈದ್ಯರ ತಂಡ ಕಾರಾಗೃಹಕ್ಕೆ ಭೇಟಿ ನೀಡಿ ಚಿಕಿತ್ಸೆ ಆರಂಭಿಸಿದೆ.

ಮೊದಲ ದಿನ ದರ್ಶನ್ ಇದ್ದ ಬ್ಯಾರಕ್‌ನಲ್ಲಿಯೇ ವೈದ್ಯರು ಸುಮಾರು ಒಂದೂವರೆ ಗಂಟೆಗಳ ಕಾಲ ಫಿಸಿಯೋಥೆರಪಿ ಚಿಕಿತ್ಸೆ ನೀಡಿದ್ದಾರೆ. ಇನ್ನು ಮುಂದೆ ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಹಿಂದೆಯೂ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರು ದರ್ಶನ್ ಅವರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಿದ್ದರು. ಆಗ ಬೆನ್ನುನೋವಿನ ಸಮಸ್ಯೆ ಕಡಿಮೆಯಾಗಿತ್ತು ಎನ್ನಲಾಗಿದೆ. ಇದೀಗ ನ್ಯಾಯಾಲಯದ ನಿರ್ದೇಶನದಂತೆ ಜೈಲಿನಲ್ಲಿಯೇ ಚಿಕಿತ್ಸೆ ಮುಂದುವರಿಯುತ್ತಿದೆ.

ಒಂದೆಡೆ ಹುಟ್ಟುಹಬ್ಬದ ದಿನ ಪತಿಯನ್ನು ಭೇಟಿಯಾಗಲು ವಿಜಯಲಕ್ಷ್ಮಿ ಆಗಮಿಸಿದ್ದರೆ, ಮತ್ತೊಂದೆಡೆ ದರ್ಶನ್ ಅವರ ಆರೋಗ್ಯ ಸುಧಾರಣೆಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ.

Exit mobile version