ಹಿರಿಯ ಹಿನ್ನೆಲೆ ಗಾಯಕಿ, ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ (88) ಅವರ ನಿಧನವು ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ. ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು, ಕಲಾವಿದರು, ರಾಜಕಾರಣಿಗಳು ಹಾಗೂ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಕೂಡ ಜಾನಕಿ ಅಮ್ಮನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವುಕರಾದರು.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ಪ್ರಕಾಶ್, ಬಾಲ್ಯದಿಂದಲೇ ರೇಡಿಯೊದಲ್ಲಿ ಎಸ್. ಜಾನಕಿ ಅವರ ಹಾಡುಗಳನ್ನು ಕೇಳುತ್ತ ಬೆಳೆದಿದ್ದೇನೆ. ಆಗ ಆ ಮಧುರ ಧ್ವನಿಯ ಹಿಂದೆ ಇದ್ದ ವ್ಯಕ್ತಿತ್ವದ ಅರಿವು ಇರಲಿಲ್ಲ. ಆದರೆ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಅವರ ಗಾಯನದ ಆಳ, ತಾಂತ್ರಿಕತೆ ಹಾಗೂ ಭಾವಪ್ರಕಾಶದ ಮಹತ್ವ ಅರ್ಥವಾಯಿತು ಎಂದು ಹೇಳಿದರು.
ಜಾನಕಿ ಅಮ್ಮ 17 ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವುದು ಸಂಗೀತ ಲೋಕದ ಅಪರೂಪದ ಸಾಧನೆ ಎಂದು ಬಣ್ಣಿಸಿದರು. “ಒಬ್ಬ ವ್ಯಕ್ತಿ 100 ವರ್ಷ ಬದುಕಿದರೂ ಸುಮಾರು 36 ಸಾವಿರ ದಿನಗಳಷ್ಟೇ ಬದುಕುತ್ತಾರೆ. ಆದರೆ ಜಾನಕಿ ಅಮ್ಮ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಾಡುಗಳನ್ನು ದಾಖಲಿಸಿದ್ದಾರೆ. ಇಷ್ಟು ದೊಡ್ಡ ಸಾಧನೆ ಮಾಡಲು ಅಪಾರ ಶ್ರಮ, ದೈಹಿಕ ಸಾಮರ್ಥ್ಯ, ಸಂಗೀತದ ಮೇಲಿನ ಅಪಾರ ಪ್ರೀತಿ ಮತ್ತು ದೇವರ ಆಶೀರ್ವಾದ ಅಗತ್ಯ. ಇದು ನಿಜಕ್ಕೂ ಒಂದು ಚಮತ್ಕಾರ” ಎಂದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಜಾನಕಿ ಅಮ್ಮನವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಭಾವುಕರಾಗಿ ಮಾತನಾಡಿದ ಅವರು, “ಜಾನಕಿ ಅಮ್ಮನವರನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂಬ ಆಸೆ ಇತ್ತು. ಆದರೆ ಅದಕ್ಕೂ ಮುನ್ನವೇ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ನಾವು ಎಲ್ಲರೂ ಅವರ ಹಾಡಿನ ಶಿಷ್ಯರು. ಅವರು ಹಾಡಿದ ಪ್ರತಿಯೊಂದು ಗೀತೆಯಲ್ಲೂ ಜೀವವಿದೆ. ಇಂದು ಆ ಜೀವ ಮೈಸೂರಿನಲ್ಲಿ ಉಸಿರು ನಿಲ್ಲಿಸಿದೆ ಎನ್ನುವುದು ನೋವಿನ ಸಂಗತಿ” ಎಂದರು.
“ಸೂರ್ಯ ಮತ್ತು ಚಂದ್ರ ಇರುವವರೆಗೂ ಜಾನಕಿ ಅಮ್ಮನ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಅವರು ತಮ್ಮ ಹಾಡುಗಳ ಮೂಲಕ ಕೋಟ್ಯಂತರ ಜನರ ಹೃದಯದಲ್ಲಿ ಪ್ರೀತಿ ಬಿತ್ತಿದವರು. ಹೊಸ ಪ್ರತಿಭೆಗಳನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಅವರು, ಮಾರ್ಗದರ್ಶನ ನೀಡಲು ಯಾವಾಗಲೂ ಸಿದ್ಧರಾಗಿದ್ದರು. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ಎಂದಿಗೂ ಭರಿಸಲಾಗದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ವಿಜಯ್ ಪ್ರಕಾಶ್ ಹೇಳಿದರು.
ಜಾನಕಿ ಅಮ್ಮನನ್ನು ಭೇಟಿಯಾದ ಪ್ರತಿಯೊಂದು ಸಂದರ್ಭದಲ್ಲೂ ಅವರು ಆತ್ಮೀಯವಾಗಿ ಮಾತನಾಡುತ್ತಿದ್ದರು. “ನಿನ್ನ ಧ್ವನಿ ತುಂಬಾ ಚೆನ್ನಾಗಿದೆ, ಇನ್ನೂ ಚೆನ್ನಾಗಿ ಹಾಡು” ಎಂದು ಹೊಸ ಗಾಯಕರಿಗೆ ಧೈರ್ಯ ತುಂಬುತ್ತಿದ್ದರು ಎಂದು ವಿಜಯ್ ಪ್ರಕಾಶ್ ಸ್ಮರಿಸಿದರು.
