ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯಗಳಿಗೆ ವೇಗ ನೀಡಿದ್ದು, ಬೆಂಗಳೂರಿನಲ್ಲಿ ಟ್ರೇಲರ್ ಬಿಡುಗಡೆ ಹಾಗೂ ಮುಂಬೈನಲ್ಲಿ ಅದ್ಧೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಸಿದೆ. ಇದೀಗ ಹೈದರಾಬಾದ್‌ನಲ್ಲಿ ಗ್ರ್ಯಾಂಡ್ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಹೈದರಾಬಾದ್‌ನ ದುಲಪಲ್ಲಿಯ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ಇಂದು ಸಂಜೆ 5 ಗಂಟೆಗೆ ‘ಟಾಕ್ಸಿಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಬಹುತಾರಾಗಣ ಹೊಂದಿರುವ ಸಿನಿಮಾದ ಪ್ರಮುಖ ಕಲಾವಿದರು ಹಾಗೂ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತೆಲುಗು ರಾಜ್ಯಗಳ ಸಿನಿಪ್ರಿಯರ ಗಮನ ಸೆಳೆಯುವ ನಿರೀಕ್ಷೆಯಿದೆ. ಯಶ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ‘ಟಾಕ್ಸಿಕ್’ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬದಂದು ಆರಂಭವಾಗಿದ್ದು, ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಿಕೆಟ್ ದರ ಕೂಡ ಹಲವು ನಗರಗಳಲ್ಲಿ ಗಮನ ಸೆಳೆಯುತ್ತಿದೆ. ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಆಯ್ದ ಪ್ರೀಮಿಯಂ ಶೋಗಳ ಟಿಕೆಟ್ ದರ ಸುಮಾರು ₹2,250ರಷ್ಟಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಫೋರಂ ರೆಕ್ಸ್ ವಾಕ್‌ನ ಕೆಲವು ಪ್ರೀಮಿಯಂ ಪ್ರದರ್ಶನಗಳ ಟಿಕೆಟ್ ದರ ಸುಮಾರು ₹2,181ರಷ್ಟಿದೆ.
ಕನ್ನಡ ಆವೃತ್ತಿಯ ಸರಾಸರಿ ಟಿಕೆಟ್ ದರ ಸುಮಾರು ₹404 ಇದ್ದರೆ, ಹಿಂದಿ ಆವೃತ್ತಿಯ ಸರಾಸರಿ ಟಿಕೆಟ್ ದರ ಸುಮಾರು ₹364ರಷ್ಟಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೆಟ್ ದರದ ವಿಚಾರದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋನಲ್ಲಿ ‘ಟಾಕ್ಸಿಕ್’ ಒಂದು ಮಿಲಿಯನ್‌ಗೂ ಅಧಿಕ ಆಸಕ್ತಿಗಳನ್ನು ಪಡೆದುಕೊಂಡಿದೆ ಎನ್ನಲಾಗಿದ್ದು, ಯಶ್ ಅಭಿನಯದ ‘ಕೆಜಿಎಫ್: ಅಧ್ಯಾಯ 2’ ಬಳಿಕ ಈ ಮೈಲಿಗಲ್ಲು ತಲುಪಿದ ಎರಡನೇ ಚಿತ್ರವಾಗಿದೆ. ಭಾರತೀಯ ಸಿನಿಮಾಗಳ ಪೈಕಿ ಬುಕ್‌ಮೈಶೋ ಆಸಕ್ತಿ ಪಟ್ಟಿಯಲ್ಲಿ ಚಿತ್ರ 13ನೇ ಸ್ಥಾನ ಪಡೆದಿದೆ.
ಇದರ ನಡುವೆ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘A’ ಪ್ರಮಾಣಪತ್ರ ನೀಡಿದೆ. ಯಾವುದೇ ಪ್ರಮುಖ ಕಟ್‌ಗಳಿಲ್ಲದೆ ಚಿತ್ರಕ್ಕೆ ಪ್ರಮಾಣಪತ್ರ ಸಿಕ್ಕಿದ್ದು, ಎರಡು ಸಣ್ಣ ಮಾರ್ಪಾಡುಗಳನ್ನು ಮಾತ್ರ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಸಿನಿಮಾದ ಒಟ್ಟು ರನ್‌ಟೈಮ್ 3 ಗಂಟೆ 12 ನಿಮಿಷಗಳಷ್ಟಿದೆ.
‘ಟಾಕ್ಸಿಕ್’ ಆಗಸ್ಟ್ 26ರಂದು ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ. ಬಿಡುಗಡೆಗೂ ಮುನ್ನವೇ ಟಿಕೆಟ್ ಬುಕಿಂಗ್, ಪ್ರೀಮಿಯಂ ದರ ಹಾಗೂ ಪ್ರಚಾರ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮೂಡಿದೆ.
