ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿರುವ ಚಿತ್ರಕ್ಕೆ ಹಲವು ಕಡೆಗಳಲ್ಲಿ ಹೌಸ್‌ಫುಲ್ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡದ ಜತೆಗೆ ಹಿಂದಿ ವರ್ಷನ್ ಕೂಡ ಉತ್ತಮ ಗಳಿಕೆ ಕಂಡಿದೆ.
ಚಿತ್ರತಂಡ ಹಂಚಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, ‘ಟಾಕ್ಸಿಕ್’ ಮೊದಲ ದಿನ ವಿಶ್ವಾದ್ಯಂತ ರೂ. 150 ಕೋಟಿ ಗಳಿಸಿದೆ ಎಂದು ಹೇಳಲಾಗಿದೆ. ಬಿಡುಗಡೆಗೂ ಮುನ್ನವೇ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ಭಾರೀ ಬೇಡಿಕೆ ಕಂಡುಬಂದಿತ್ತು. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಹಲವು ಶೋಗಳು ಹೌಸ್‌ಫುಲ್ ಆಗಿದ್ದವು.
ಬೆಳಗ್ಗೆ 6 ಗಂಟೆಯಿಂದಲೇ ಚಿತ್ರದ ಮೊದಲ ಶೋಗಳು ಆರಂಭವಾಗಿದ್ದವು. ಟಿಕೆಟ್ ದರ ಹೆಚ್ಚಿದ್ದರೂ ಅಭಿಮಾನಿಗಳ ಉತ್ಸಾಹಕ್ಕೆ ಯಾವುದೇ ಕಡಿಮೆಯಾಗಿರಲಿಲ್ಲ. ಇದೂ ಕೂಡ ಮೊದಲ ದಿನದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ.
‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಅದ್ಧೂರಿಯಾಗಿ ನಿರ್ಮಿಸಿದೆ. ಸಿನಿಮಾದ ಮೇಕಿಂಗ್, ಆ್ಯಕ್ಷನ್ ಸನ್ನಿವೇಶಗಳು ಹಾಗೂ ಅದ್ದೂರಿ ದೃಶ್ಯ ವೈಭವಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಕಥಾಹಂದರದ ವಿಚಾರದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಮಿಶ್ರವಾಗಿದೆ. ಕೆಲವರು ಸಿನಿಮಾದ ಕಥೆ ಹಾಗೂ ನಿರೂಪಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಯಶ್ ಜತೆಗೆ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ನಯನತಾರಾ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳು ಹಾಗೂ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಾಸ್ ಮತ್ತು ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಚಿತ್ರ ಮೆಚ್ಚುಗೆಯಾಗಿದೆ.
ಇನ್ನು ‘ಟಾಕ್ಸಿಕ್’ಗೆ ಬಾಕ್ಸ್ ಆಫೀಸ್‌ನಲ್ಲಿ ಇತರೆ ಸಿನಿಮಾಗಳಿಂದಲೂ ಪೈಪೋಟಿ ಎದುರಾಗಿದೆ. ಈಗಾಗಲೇ ಉತ್ತಮ ಪ್ರದರ್ಶನ ಕಾಣುತ್ತಿರುವ ‘ದಿ ಆಡಸ್ಸಿ’, ‘ವಿಶ್ವನಾಥ್ ಆ್ಯಂಡ್ ಸನ್ಸ್’ ಮತ್ತು ‘ಇರುಮುಡಿ’ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.
ಮೊದಲ ದಿನದ ಭರ್ಜರಿ ಆರಂಭದ ಹೊರತಾಗಿಯೂ ‘ಟಾಕ್ಸಿಕ್’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗೆ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಹಾಗೂ ವೀಕೆಂಡ್ ಬುಕಿಂಗ್ ಸಿನಿಮಾದ ಮುಂದಿನ ಬಾಕ್ಸ್ ಆಫೀಸ್ ಓಟವನ್ನು ನಿರ್ಧರಿಸುವ ಸಾಧ್ಯತೆಯಿದೆ.
