ಜಾಗತಿಕ ಸಿನಿಪ್ರಿಯರು ಕಾತರದಿಂದ ಕಾಯುತ್ತಿರುವ ಹಾಲಿವುಡ್‌ನ ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾ ಭಾರತದಲ್ಲೂ ಬಿಡುಗಡೆಗೆ ಸಜ್ಜಾಗಿದೆ. ಆದರೆ, ವಿದೇಶಗಳಲ್ಲಿ ಬಿಡುಗಡೆಯಾಗುತ್ತಿರುವ ಆವೃತ್ತಿಯನ್ನೇ ಭಾರತೀಯ ಪ್ರೇಕ್ಷಕರು ನೋಡಲು ಸಾಧ್ಯವಾಗುವುದಿಲ್ಲ. ಕಾರಣ, ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ (CBFC) ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದು, ತಿದ್ದುಪಡಿಗಳ ನಂತರ ಚಿತ್ರಕ್ಕೆ ‘UA 13+’ ಪ್ರಮಾಣಪತ್ರ ನೀಡಿದೆ.
ಆಕ್ಷೇಪಾರ್ಹ ಪದ ತೆಗೆದುಹಾಕುವಂತೆ ನಿರ್ದೇಶನ
ಸೆನ್ಸಾರ್ ಮಂಡಳಿಯ ಸೂಚನೆಯಂತೆ, ಸಿನಿಮಾದಲ್ಲಿದ್ದ 8 ಸೆಕೆಂಡ್‌ಗಳ ಚುಂಬನದ (Kissing) ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜೊತೆಗೆ, ಚಿತ್ರದ ಆಡಿಯೋ ಹಾಗೂ ಸಬ್‌ಟೈಟಲ್‌ಗಳಲ್ಲಿ ಬಳಸಲಾಗಿದ್ದ ಕೆಲವು ಆಕ್ಷೇಪಾರ್ಹ ಪದಗಳನ್ನೂ ತೆಗೆದುಹಾಕುವಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಲಾಗಿತ್ತು. ಈ ಎಲ್ಲಾ ಬದಲಾವಣೆಗಳನ್ನು ಮಾಡಿದ ಬಳಿಕವೇ ಚಿತ್ರಕ್ಕೆ ಭಾರತದಲ್ಲಿ ಬಿಡುಗಡೆಯ ಅನುಮತಿ ದೊರೆತಿದೆ.
ಈ ತಿದ್ದುಪಡಿಗಳ ನಂತರ ಚಿತ್ರದ ಒಟ್ಟು ಅವಧಿ 2 ಗಂಟೆ 24 ನಿಮಿಷಗಳು ಎಂದು ಅಧಿಕೃತವಾಗಿ ದೃಢಪಡಿಸಲಾಗಿದೆ.
ಇದೀಗ ಸೆನ್ಸಾರ್ ಮಂಡಳಿಯ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, 13 ವರ್ಷ ಮೇಲ್ಪಟ್ಟವರಿಗೆ ಪೋಷಕರ ಮಾರ್ಗದರ್ಶನದೊಂದಿಗೆ ವೀಕ್ಷಿಸಲು ಅನುಮತಿ ನೀಡಿರುವಾಗಲೂ ಚುಂಬನದ ದೃಶ್ಯವನ್ನು ತೆಗೆದುಹಾಕುವ ಅಗತ್ಯವೇನಿತ್ತು? ಎಂದು ಅನೇಕ ಸಿನಿಮಾ ಪ್ರಿಯರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ
ರೆಡ್ಡಿಟ್, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಿಬಿಎಫ್‌ಸಿಯ ನಿರ್ಧಾರವನ್ನು ಟೀಕಿಸಿದ್ದಾರೆ. ಕೆಲವರು, “ಬಾಲಿವುಡ್ ಸಿನಿಮಾಗಳಲ್ಲಿನ ಕೆಲವು ದೃಶ್ಯಗಳಿಗೆ ಸಡಿಲಿಕೆ ನೀಡುವ ಮಂಡಳಿ, ಹಾಲಿವುಡ್ ಚಿತ್ರಗಳ ವಿಷಯದಲ್ಲಿ ಮಾತ್ರ ಕಠಿಣ ನಿಲುವು ತಾಳುತ್ತಿದೆ” ಎಂದು ಆರೋಪಿಸಿದ್ದಾರೆ.
ಮತ್ತೊಬ್ಬ ನೆಟ್ಟಿಗರು, “ಕಳೆದ ವರ್ಷ ಬಿಡುಗಡೆಯಾದ ‘ಸೂಪರ್‌ಮ್ಯಾನ್’ ಚಿತ್ರದ ಚುಂಬನದ ದೃಶ್ಯಕ್ಕೂ ಇದೇ ರೀತಿಯ ಕತ್ತರಿ ಹಾಕಲಾಗಿತ್ತು. ಇದೇ ಧೋರಣೆ ಮತ್ತೆ ಮುಂದುವರಿದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಸೆನ್ಸಾರ್ ಮಂಡಳಿಯು ತನ್ನ ಮಾರ್ಗಸೂಚಿಗಳ ಪ್ರಕಾರವೇ ಚಿತ್ರದ ಪರಿಶೀಲನೆ ನಡೆಸಿ ಅಗತ್ಯ ತಿದ್ದುಪಡಿಗಳನ್ನು ಸೂಚಿಸಿದೆ. ಭಾರತದಲ್ಲಿ ಬಿಡುಗಡೆಯಾಗುವ ಎಲ್ಲ ಚಿತ್ರಗಳೂ ಪ್ರಮಾಣೀಕರಣ ನಿಯಮಗಳಿಗೆ ಅನುಗುಣವಾಗಿರಬೇಕೆಂಬುದು ಮಂಡಳಿಯ ನಿಲುವಾಗಿದೆ.
ಒಟ್ಟಾರೆ, ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಬಿಡುಗಡೆಯ ಮುನ್ನವೇ ಸೆನ್ಸಾರ್ ತಿದ್ದುಪಡಿಗಳ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಭಾರತೀಯ ಆವೃತ್ತಿಯ ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
