ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಅಮಾನವೀಯ ದಾಳಿಗಳು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಮನೆಗಳಿಗೆ ಬೆಂಕಿ ಹಚ್ಚುವುದು, ದೇವಸ್ಥಾನಗಳ ಧ್ವಂಸ ಮತ್ತು ಅಮಾಯಕ ಹಿಂದೂಗಳ ಭೀಕರ ಹತ್ಯೆಗಳು ಮುಂದುವರಿಯುತ್ತಲೇ ಇವೆ. ಈ ರಕ್ತಪಾತವನ್ನು ಕಂಡು ಬಾಲಿವುಡ್‌ನ ತಾರೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಬೂಟಾಟಿಕೆಯ ಪರಮಾವಧಿ ಎಂದ ಜಾನ್ವಿ ಕಪೂರ್
ನಟಿ ಜಾನ್ವಿ ಕಪೂರ್ ಬಾಂಗ್ಲಾದೇಶದ ಸ್ಥಿತಿಯನ್ನು ಹತ್ಯಾಕಾಂಡ ಎಂದು ಹೇಳಿದ್ದಾರೆ. ಇತ್ತೀಚೆಗೆ ದೀಪು ಚಂದ್ರದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಘಟನೆ ಬಗ್ಗೆ ಮಾತನಾಡಿದ ಅವರು, ನಮ್ಮ ಕಣ್ಣೆದುರೇ ನಮ್ಮ ಸಹೋದರ-ಸಹೋದರಿಯರು ಸುಟ್ಟು ಸಾಯುತ್ತಿದ್ದಾರೆ. ಜಗತ್ತಿನ ಯಾವುದೋ ಮೂಲೆಯ ವಿಚಾರಗಳಿಗೆ ಅಳುವ ನಾವು, ಪಕ್ಕದಲ್ಲೇ ನಡೆಯುತ್ತಿರುವ ಈ ಅನಾಗರಿಕತೆಯನ್ನು ಕಂಡು ಮೌನವಾಗಿರುವುದು ಬೂಟಾಟಿಕೆ. ಈ ವಿಕೃತ್ಯಗಳನ್ನ ಕಂಡೂ ನಿಮಗೆ ಕೋಪ ಬರದಿದ್ದರೆ ನಮ್ಮ ನಾಶಕ್ಕೆ ಬೇರೆ ಕಾರಣ ಬೇಕಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತ ಮತ್ತು ಬಾಲಿವುಡ್‌ನ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇನ್‌ಸ್ಟಾಗ್ರಾಮ್‌ನಲ್ಲಿ “ಎಲ್ಲರ ಕಣ್ಣುಗಳು ಬಾಂಗ್ಲಾದೇಶ ಹಿಂದೂಗಳ ಮೇಲೆ” ಎಂಬ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಿಂದೂಗಳೇ ಈಗಲಾದರೂ ಎಚ್ಚರಗೊಳ್ಳಿ, ನಿಮ್ಮ ಮೌನ ನಿಮ್ಮನ್ನು ಉಳಿಸುವುದಿಲ್ಲ ಎಂದು ಬರೆಯುವ ಮೂಲಕ ಧೋರಣೆಯ ವಿರುದ್ಧ ಅಲ್ಪಸಂಖ್ಯಾತ ಹಿಂದೂಗಳ ಪರವಾಗಿ ಧ್ವನಿ ಎತ್ತಿದ್ದಾರೆ.
ಜಯಪ್ರದಾ ಅವರ ಹೃದಯಸ್ಪರ್ಶಿ ಮಾತುಗಳು:
ಮಾಜಿ ಸಂಸದೆ ಮತ್ತು ಹಿರಿಯ ನಟಿ ಜಯಪ್ರದಾ ಅವರು ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ದೀಪು ಚಂದ್ರ ದಾಸ್ ಅವರನ್ನು ಕೊಂದ ಕ್ರೌರ್ಯ ನೋಡಿ ನನ್ನ ಹೃದಯ ರಕ್ತಸಿಕ್ತವಾಗುತ್ತಿದೆ. ಇದು ಕೇವಲ ಹಿಂಸೆಯಲ್ಲ, ಇದು ಹಿಂದೂ ಧರ್ಮದ ಮೇಲಿನ ನೇರ ದಾಳಿ. ಜಾತ್ಯತೀತತೆಯ ಹೆಸರಿನಲ್ಲಿ ನಾವು ಎಷ್ಟು ದಿನ ಮೌನವಾಗಿರಲು ಸಾಧ್ಯ ? ನಮ್ಮ ದೇವಾಲಯಗಳನ್ನು ಕೆಡವಲಾಗುತ್ತಿದೆ, ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿದೆ. ನಾವೆಲ್ಲರೂ ಒಗ್ಗೂಡಿ ಅವರಿಗೆ ನ್ಯಾಯ ಕೊಡಿಸಬೇಕಿದೆ ಎಂದು ಕರೆ ನೀಡಿದ್ದಾರೆ.
ಬಾಂಗ್ಲಾದಲ್ಲಿನ ಭೀಕರ ವಾಸ್ತವ:
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಉಗ್ರವಾದ ಹೆಚ್ಚುತ್ತಿದ್ದು, ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ದೀಪು ಚಂದ್ರದಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಯುವಕನ ಹತ್ಯೆ ನಡೆದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಬಾಲಿವುಡ್ ತಾರೆಯರ ಈ ಧ್ವನಿಯು ಭಾರತದಾದ್ಯಂತ ಸಂಚಲನ ಮೂಡಿಸಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಮಧ್ಯಪ್ರವೇಶಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
