ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ರಾಜಸ್ಥಾನದ ಐತಿಹಾಸಿಕ ಸಮೋಡೆ ಪ್ಯಾಲೇಸ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು, ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಈ ಅದ್ಧೂರಿ ವಿವಾಹ ಸಮಾರಂಭದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನವದಂಪತಿಗೆ ಅಭಿಮಾನಿಗಳು ಮತ್ತು ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ನಟಿ ಧನ್ಯಾ ರಾಮ್ ಅವರು ಮದುವೆಯ ವಿಶೇಷ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ, ಶರ್ಮಿಳಾ ಮಾಂಡ್ರೆ ಅವರ ವಿವಾಹದ ಸುದ್ದಿ ಅಭಿಮಾನಿಗಳ ಗಮನ ಸೆಳೆದಿದೆ.
ಇದಕ್ಕೂ ಮುನ್ನ, ಜೂನ್ 25, 2026ರಂದು ಬೆಂಗಳೂರಿನ ತಾರಾ ಹೋಟೆಲ್‌ನಲ್ಲಿ ಶರ್ಮಿಳಾ ಹಾಗೂ ಸುಧನ್ ಸುಂದರಂ ಅವರ ನಿಶ್ಚಿತಾರ್ಥ ನೆರವೇರಿತ್ತು. ನಂತರ ಬೆಂಗಳೂರಿನಲ್ಲಿರುವ ಶರ್ಮಿಳಾ ನಿವಾಸದಲ್ಲಿ ಸಾಂಪ್ರದಾಯಿಕ ಪೂಜೆಗಳು ನಡೆದಿದ್ದು, ಜುಲೈ 11ರಂದು ಹಳದಿ, ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದವು. ಈ ಕಾರ್ಯಕ್ರಮಗಳಲ್ಲಿ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು, ವಿಶೇಷವಾಗಿ ನಟಿ ರಮ್ಯಾ, ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು.
2007ರಲ್ಲಿ ಬಿಡುಗಡೆಯಾದ ‘ಸಜನಿ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶರ್ಮಿಳಾ ಮಾಂಡ್ರೆ, ಬಳಿಕ ‘ಕೃಷ್ಣ’, ‘ನವಗ್ರಹ’, ‘ಗಾಳಿಪಟ 2’, ‘ದಿ ಡೆವಿಲ್’ ಸೇರಿದಂತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಅಭಿನಯಿಸಿರುವ ಅವರು, ಪ್ರಸ್ತುತ ‘ಅದೃಷ್ಟಶಾಲಿ’ (ತಮಿಳು) ಹಾಗೂ ‘ದಸರಾ‘ (ಕನ್ನಡ) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ನಟನೆಗೆ ಮಾತ್ರ ಸೀಮಿತವಾಗದೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶರ್ಮಿಳಾ, ತಮಿಳಿನಲ್ಲಿ ನಾಲ್ಕು ಸಿನಿಮಾಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಕನ್ನಡದ ‘ದಸರಾ‘ ಹಾಗೂ ತಮಿಳಿನ ‘ಕಾದಲ್ ಕೊಂಜಂ ತೂಕಲಾ‘ ಚಿತ್ರದ ಸಹ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಧನ್ ಸುಂದರಂ ಯಾರು?
ಶರ್ಮಿಳಾ ಮಾಂಡ್ರೆ ಅವರ ಪತಿ ಸುಧನ್ ಸುಂದರಂ ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಪ್ಯಾಷನ್ ಸ್ಟುಡಿಯೋಸ್‌ನ ಸಂಸ್ಥಾಪಕರು ಮತ್ತು ನಿರ್ಮಾಪಕರಾಗಿದ್ದಾರೆ. ವಿಜಯ್ ಸೇತುಪತಿ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಮಹಾರಾಜ‘ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ‘ಪಾರ್ಕಿಂಗ್‘ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.