ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಮತ್ತು ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ತಾಯಿಯಾಗುವ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಐವಿಎಫ್ (In Vitro Fertilization) ತಂತ್ರಜ್ಞಾನದ ಮೂಲಕ ಈಗ ಆರು ತಿಂಗಳ ಗರ್ಭಿಣಿಯಾಗಿರುವ ಭಾವನಾ, ಒಂದಲ್ಲ, ಎರಡು ಮಕ್ಕಳಿಗೆ ತಾಯಿಯಾಗಲಿದ್ದಾರೆ. ಈ ಡಬಲ್ ಖುಷಿಯ ಸುದ್ದಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ.
ಭಾವನಾ ರಾಮಣ್ಣ ತಮ್ಮ ಜೀವನದ ಈ ಹೊಸ ಅಧ್ಯಾಯದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. “ತುಂಬು ಕುಟುಂಬದಲ್ಲಿ ಬೆಳೆದ ನನಗೆ ಈವರೆಗೂ ತಾಯಿಯಾಗುವ ಬಯಕೆ ಇರಲಿಲ್ಲ. ಆದರೆ ಕೆಲವು ವರ್ಷಗಳಿಂದ ಈ ಆಸೆ ನನಗೆ ಕಾಡುತ್ತಿತ್ತು. ಐವಿಎಫ್‌ನ ಸಹಾಯದಿಂದ ಈಗ ಗರ್ಭಿಣಿಯಾಗಿದ್ದೇನೆ. ಅವಳಿ ಮಕ್ಕಳಿಗೆ ಜನ್ಮ ನೀಡುವ ಉತ್ಸಾಹದಲ್ಲಿದ್ದೇನೆ,” ಎಂದು ಭಾವನಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಸಂತಸದ ಕ್ಷಣವನ್ನು ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಂಡಿದ್ದಾರೆ.
ತುಳು ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ಭಾವನಾ, ಚಂದ್ರಮುಖಿ ಪ್ರಾಣಸಖಿ, ನೀ ಮುಡಿದ ಕ್ಷಾಮ, ಭಾಗೀರಥಿ ಮತ್ತು ಮಲ್ಲಿಗೆ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಅವರ ಭರತನಾಟ್ಯ ಕಲೆಯೂ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶೇಷವಾಗಿ, ನೀ ಮುಡಿದ ಕ್ಷಾಮ, ಭಾಗೀರಥಿ ಮತ್ತು ಮಲ್ಲಿಗೆ ಚಿತ್ರಗಳಿಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಭಾವನಾ ಅವರ ವೈಯಕ್ತಿಕ ಜೀವನದ ಕುರಿತು ಕೆಲವು ವದಂತಿಗಳು ಚಿತ್ರರಂಗದಲ್ಲಿ ಹರಿದಾಡಿದ್ದವು. ಆದರೆ, ಈ ವದಂತಿಗಳಿಗೆ ಯಾವುದೇ ಉತ್ತರ ನೀಡದೆ, ತಮ್ಮ ಕೆಲಸದ ಮೂಲಕವೇ ಎಲ್ಲವನ್ನೂ ಎದುರಿಸಿದ ಭಾವನಾ, ಈಗ ಒಂಟಿಯಾಗಿಯೇ ತಾಯಿಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. “ನಾನು ಈಗ ತಾಯಿಯಾಗುವ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ. ಈ ಪಯಣವನ್ನು ಆನಂದಿಸುತ್ತಿದ್ದೇನೆ,” ಎಂದು ಭಾವನಾ ಹೇಳಿದ್ದಾರೆ.





