ಯಶ್ ರಾಮಾಯಣ ಪರ ಸಲ್ಲು ಬ್ಯಾಟ್.. ಭೇಷ್ ಎಂದ ಭಾರತೀಯರು

Untitled design (21)

ರಣಬೀರ್ ಕಪೂರ್ ರಾಮನಾಗಿ, ನಮ್ಮ ರಾಕಿ ಭಾಯ್ ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಬ್ಬರಿಸುತ್ತಿರುವ ನಿತೀಶ್ ತಿವಾರಿ ನಿರ್ದೇಶನದ 4,000 ಕೋಟಿ ರೂ. ಬಜೆಟ್ ‘ರಾಮಾಯಣ’ ಚಿತ್ರದ ಮೇಲಿನ ಟೀಕೆಗಳಿಗೆ ಬಾಲಿವುಡ್ ಬಾದ್ಶಾ ಸಲ್ಮಾನ್ ಖಾನ್ ಸಖತ್ ಕಾರವಾಗಿ ತಿರುಗೇಟು ನೀಡಿದ್ದಾರೆ. ಕೇವಲ ಹಣ ಮತ್ತು ವಿಎಫ್ಎಕ್ಸ್ ಲೆಕ್ಕಾಚಾರದಲ್ಲಿ ಶ್ರೀರಾಮನ ಮೌಲ್ಯವನ್ನು ಅಳೆಯಬೇಡಿ ಎಂದಿರುವ ಸಲ್ಲು ಭಾಯ್ 20 ವರ್ಷಗಳ ಹಿಂದೆಯೇ ರಾಮ-ಲಕ್ಷ್ಮಣರಾಗಬೇಕಿದ್ದ ಘಟನೆಯನ್ನು ತೆರೆದಿಟ್ಟಿದ್ದಾರೆ.

ಬಾಲಿವುಡ್ ನ ಬಹುನಿರೀಕ್ಷಿತ ಮಾತೃಭೂಮಿ ಚಿತ್ರದ  ಈವೆಂಟ್ನಲ್ಲಿ ಮಾತನಾಡಿದ ಸಲ್ಮಾನ್ ಖಾನ್, ರಾಮಾಯಣ ಸಿನಿಮಾದ ಸುತ್ತ ನಡೆಯುತ್ತಿರುವ 4,000 ಕೋಟಿ  ಬಜೆಟ್ ಹಾಗೂ ಸಿಜಿ-ವಿಎಫ್ಎಕ್ಸ್ ಟೀಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಯಾವಾಗಲೂ ಬಜೆಟ್, ಬಜೆಟ್, ವಿಎಫ್ಎಕ್ಸ್ ಎಂದು ಚರ್ಚಿಸುವುದು ಕಂಪ್ಲೀಟ್ ತಪ್ಪು. ಈ ಕಾವ್ಯದ ಚರ್ಚೆ ರಾಮ, ಸೀತೆ ಮತ್ತು ರಾವಣನ ಪವಿತ್ರತೆ ಹಾಗೂ ಮೌಲ್ಯಗಳ ಮೇಲೆ ನಡೆಯಬೇಕೇ ಹೊರತು ಕೋಟಿ ಕೋಟಿ ಹಣದ ಲೆಕ್ಕಾಚಾರದಲ್ಲಲ್ಲ” ಎಂದು ಟ್ರೋಲಿಗರಿಗೆ ಸಲ್ಲು ಖಾರವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶ್ರೀರಾಮನ ಅಪಾರ ಗುಣಗಾನ ಮಾಡಿದ ಸಲ್ಮಾನ್ ಖಾನ್, ರಾಮ ಕೇವಲ ಒಬ್ಬ ಯೋಧನಲ್ಲ, ಆತ ಅತ್ಯುತ್ತಮ ಪತಿ, ಆದರ್ಶ ಪುತ್ರ, ಶ್ರೇಷ್ಠ ಸಹೋದರ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವ ಧೀರ ಎಂದು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮುಂಬರುವ ಮಾತೃಭೂಮಿ ಚಿತ್ರದ ನಾಯಕನ ಪಾತ್ರದಲ್ಲೂ ಶ್ರೀರಾಮನ ಈ ಎಲ್ಲಾ ಪವಿತ್ರ ಆದರ್ಶಗಳು ಮಿಳಿತಗೊಂಡಿದ್ದು, ಭಾರತೀಯ ಸೈನಿಕನ ತ್ಯಾಗದ ಬದುಕನ್ನು ಇದು ಪ್ರತಿಯೊಬ್ಬರಿಗೂ ತಲುಪಿಸಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದೇ ವೇಳೆ 20 ವರ್ಷಗಳ ಹಿಂದಿನ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟ ಸಲ್ಲು, ತಾವೂ ಮತ್ತು ತಮ್ಮ ಸಹೋದರ ಒಮ್ಮೆ ರಾಮಾಯಣ ಆಧಾರಿತ ಚಿತ್ರದಲ್ಲಿ ನಟಿಸಲು ಪ್ಲಾನ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. “ಅಂದು ಸಿನಿಮಾ ಪ್ರಕಟವಾದ ತಕ್ಷಣ ಮಧ್ಯರಾತ್ರಿ ನಾವು ಹೊರಬಂದ ಫೋಟೋಗಳನ್ನು ಪತ್ರಿಕೆಯೊಂದು ಪ್ರಕಟಿಸಿ, ತಲೆಗೆ ಕಿರೀಟ ಹಾಕಿ ಇವರೇ ನೋಡಿ ನಮ್ಮ ರಾಮ-ಲಕ್ಷ್ಮಣ ಎಂದು ಹೆಡ್ಲೈನ್ ಕೊಟ್ಟಿತ್ತು. ಆ ಸುದ್ದಿ ನೋಡಿ ನಾವಿಬ್ಬರೂ ಆ ಸಿನಿಮಾವನ್ನೇ ಡ್ರಾಪ್ ಮಾಡಿದೆವು ಎಂದು ನಗುತ್ತಾ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇನ್ನೊಂದೆಡೆ, ಸಲ್ಲು ಅಭಿಮಾನಿಗಳು ಕಾಯುತ್ತಿದ್ದ ಮಾತೃಭೂಮಿ ಚಿತ್ರದ ರಿಲೀಸ್ ಡೇಟ್ಗೆ ಸಣ್ಣ ಟ್ವಿಸ್ಟ್ ಸಿಕ್ಕಿದೆ. ಮುಂಬರುವ ನವೆಂಬರ್ 20ಕ್ಕೆ ಬರಬೇಕಿದ್ದ ಈ ಬಿಗ್ ಬಜೆಟ್ ಪೇಟ್ರಿಯಾಟಿಕ್ ಸಿನಿಮಾ, ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸಗಳಲ್ಲಿ ಯಾವುದೇ ಕೊರತೆ ಇರಬಾರದು ಎನ್ನುವ ಕಾರಣಕ್ಕೆ ಮುಂದೂಡಲ್ಪಟ್ಟಿದೆ. ಇದೀಗ ಗ್ರಾಂಡ್ ಮೇಕಿಂಗ್ನೊಂದಿಗೆ ಡಿಸೆಂಬರ್ 4ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಧಮಾಕಾ ಎಬ್ಬಿಸಲು ಸಲ್ಮಾನ್ ಖಾನ್ ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ, ಬಜೆಟ್ ಮತ್ತು ವಿಎಫ್ಎಕ್ಸ್ ಹುಚ್ಚಾಟದ ಮಧ್ಯೆ ರಾಮಾಯಣದಂತ ಮಹಾಕಾವ್ಯದ ನಿಜವಾದ ಸಾರವನ್ನು ಎತ್ತಿಹಿಡಿದಿರುವ ಸಲ್ಮಾನ್ ಖಾನ್ ಅವರ ಮಾತುಗಳು ಈಗ ನೆಟ್ಟಿಗರ ಹಾಗೂ ಸಿನಿರಂಗದ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಕೇವಲ ಹಣದ ಹಂಗಿಲ್ಲದೆ ಪ್ರೇಕ್ಷಕರ ಮನ ಮುಟ್ಟುವುದು ಸಿನಿಮಾದ ಮೂಲ ಉದ್ದೇಶ ಎಂಬ ಸಂದೇಶ ನೀಡಿರುವ ಸಲ್ಮಾನ್ ಖಾನ್, ಮುಂಬರುವ ಡಿಸೆಂಬರ್ನಲ್ಲಿ ಮಾತೃಭೂಮಿ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಲು ರೆಡಿಯಾಗಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version