ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಪಾತ್ರಕ್ಕೆ ಸಾಯಿ ಪಲ್ಲವಿ ಫಿಕ್ಸ್ ?

Untitled design 2025 12 17T223229.080

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ, ‘ನ್ಯಾಚುರಲ್ ಬ್ಯೂಟಿ’ ಎಂದೇ ಹೆಸರಾದ ಸಾಯಿ ಪಲ್ಲವಿ (Sai Pallavi) ಮತ್ತೊಂದು ಐತಿಹಾಸಿಕ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಭಾರತದ ಶ್ರೇಷ್ಠ ಶಾಸ್ತ್ರೀಯ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಧಾನ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.

 ಮಳ್ಳಿ ರಾವ ಮತ್ತು ಜೆರ್ಸಿಯಂತಹ ಹೆಚ್ಚು ಪ್ರಖ್ಯಾತವಾದ ಸಿನಿಮಾಗಳನ್ನ ಸಿನಿಮಾಗಳನ್ನು ನೀಡಿದ ಗೌತಮ್ ತಿನ್ನನುರಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಪ್ರತಿಷ್ಠಿತ ‘ಗೀತಾ ಆರ್ಟ್ಸ್’ ಸಂಸ್ಥೆಯು ಈ ಬೃಹತ್ ಚಿತ್ರವನ್ನು ನಿರ್ಮಿಸಲಿದೆ. ಸದ್ಯ ಚಿತ್ರವು ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರತಂಡವು ಸಂಶೋಧನೆ ಮತ್ತು ಕಥೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಶೀಘ್ರದಲ್ಲೇ ಚಿತ್ರದ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ಎಂ.ಎಸ್. ಸುಬ್ಬಲಕ್ಷ್ಮಿ ಅವರು ಕೇವಲ ಗಾಯಕಿಯಲ್ಲ, ಅವರು ಭಾರತೀಯ ಸಂಸ್ಕೃತಿಯ ರಾಯಭಾರಿ. ಅವರ ಪಾತ್ರಕ್ಕೆ ನ್ಯಾಯ ಒದಗಿಸುವುದು ಸಾಮಾನ್ಯ ಮಾತಲ್ಲ. ಈ ಸವಾಲನ್ನು ಸ್ವೀಕರಿಸಿರುವ ಸಾಯಿ ಪಲ್ಲವಿ, ಪಾತ್ರಕ್ಕಾಗಿ ವಿಶೇಷ ತಯಾರಿ ಆರಂಭಿಸಿದ್ದಾರೆ ಎನ್ನಲಾಗಿದೆ. ಅವರ ಹಾಡುವ ಶೈಲಿ, ಹಾವಭಾವ ಹಾಗೂ ಶಾಸ್ತ್ರೀಯ ಸಂಗೀತದ ಪಟ್ಟುಗಳನ್ನು ಅರಿಯಲು ಸಾಯಿ ಪಲ್ಲವಿ ಶ್ರಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನೃತ್ಯಗಾರ್ತಿಯೂ ಆಗಿರುವ ಸಾಯಿ ಪಲ್ಲವಿಗೆ ಈ ಪಾತ್ರಕ್ಕೆ ಬೇಕಾದ ಲಯ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳುವುದು ಸುಲಭವಾಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

ಎಂ.ಎಸ್. ಸುಬ್ಬಲಕ್ಷ್ಮಿ ಅವರು ಸಂಗೀತ ಕ್ಷೇತ್ರದಲ್ಲಿ ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದವರು. ಅವರ ‘ವೆಂಕಟೇಶ ಸುಪ್ರಭಾತಂ’ ಮತ್ತು ‘ವಿಷ್ಣು ಸಹಸ್ರನಾಮ’ ಇಂದಿಗೂ ಮನೆಮನೆಗಳಲ್ಲಿ ಮೊಳಗುತ್ತಿವೆ. ಇಂತಹ ದೈವಿಕ ವ್ಯಕ್ತಿತ್ವದ ಪಾತ್ರವನ್ನು ಸಾಯಿ ಪಲ್ಲವಿ ಹೇಗೆ ನಿರ್ವಹಿಸಲಿದ್ದಾರೆ ಎಂಬುದನ್ನ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.

ಸದ್ಯ ಸಾಯಿ ಪಲ್ಲವಿ ಅವರು ಭಾರತೀಯ ಚಿತ್ರರಂಗದ ಮೋಸ್ಟ್ ವಾಟೆಂಡ್ ನಟಿಯಾಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಣ್​​ಬೀರ್ ಕಪೂರ್ ಜೊತೆ ಸೀತೆಯ ಪಾತ್ರದಲ್ಲಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಎಂಎಸ್ಎಸ್ ಬಯೋಪಿಕ್‌ನ ಸಿನಿಮಾ ಒಪ್ಪಿಕೊಂಡಿಡುವುದು ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಲಿದೆ. ಒಟ್ಟಿನಲ್ಲಿ, ಗ್ಲಾಮರ್ ಪಾತ್ರಗಳಿಗಿಂತ ಪರ್ಫಾರ್ಮೆನ್ಸ್ ಆಧಾರಿತ ಪಾತ್ರಗಳಿಗೆ ಒತ್ತು ನೀಡುವ ಸಾಯಿ ಪಲ್ಲವಿ, ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.

Exit mobile version