ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ಗೊತ್ತಿಲ್ಲ ಅಂತ ಟಾಕ್ ಶೋ ಒಂದರಲ್ಲಿ ಅವರು ಆಡಿದ ಒಂದೇ ಒಂದು ಮಾತು ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು, ಕನ್ನಡ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಕನ್ನಡ ಗೊತ್ತಿದ್ರು ಗೊತ್ತಿಲ್ಲ ಅಂತ ಸಾಯಿ ಪಲ್ಲವಿ ಹೇಳಿದ್ಯಾಕೆ..? ಅದರ ರಿಪೋರ್ಟ್ ಇಲ್ಲಿದೆ.
- ‘ಕನ್ನಡ ಗೊತ್ತಿಲ್ಲ’.. ಸಾಯಿ ಪಲ್ಲವಿ ಮಾತಿಗೆ ಕನ್ನಡಿಗರು ಗರಂ
- ಗಾರ್ಗಿ ಸಿನಿಮಾಗೆ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ದ ನಟಿಮಣಿ
- ಬಡಗ ಭಾಷೆಯ ನಂಟು.. ಕನ್ನಡದ ಬಗ್ಗೆ ಮೌನವೇಕೆ ಸೀತೆ..?
- ರಾಮಾಯಣ ಬೆಂಗಳೂರು ಇವೆಂಟ್ನಲ್ಲೂ ಕನ್ನಡ ಮಾತು
ತೆರೆಯ ಮೇಲೆ ಸದಾ ಸರಳತೆಯಿಂದ ಮೈದುಂಬಿಕೊಳ್ಳುವ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿರುವ ಈ ನಟಿ, ಜಸ್ಟ್ ಒಂದೇ ಒಂದು ಮಾತಿನಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದಾರೆ. ಹೌದು.. ತೆಲುಗಿನ ಜನಪ್ರಿಯ ಟಾಕ್ ಶೋ ಒಂದರಲ್ಲಿ ಜಗಪತಿ ಬಾಬು ಕೇಳುವ ಪ್ರಶ್ನೆಗೆ ಉತ್ತರಿಸುವಾಗ ಬಿಗ್ ಎಡವಟ್ ಮಾಡಿಕೊಂಡಿದ್ದಾರೆ. ನಿಮಗೆ ಯಾವ್ಯಾವ ಭಾಷೆ ಬರುತ್ತೆ ಅಂತ ಕೇಳಿದಾಗ.. ತೆಲುಗು, ತಮಿಳು, ಮಲಯಾಳಂ ಅಂತ ಲಿಸ್ಟ್ ಬಿಚ್ಚಿಟ್ಟರು. ಆದ್ರೆ ಜಗ್ಗುಬಾಯಿ ಕನ್ನಡ ಅಂದ ಕೂಡಲೇ.. ಥಟ್ಟನೆ “ಐ ಡೋಂಟ್ ನೋ” ಅಂದುಬಿಟ್ರು.
ಅರೇ.. ತೆಲುಗು-ತಮಿಳಲ್ಲಿ ಸರಾಗವಾಗಿ ಮ್ಯಾನೇಜ್ ಮಾಡೋ ಈಕೆಗೆ ಕರ್ನಾಟಕದ ಕೋಟ್ಯಂತರ ಜನರ ಪ್ರೀತಿ ಪಡೆದ ಮೇಲೆ ಕನ್ನಡ ಅಂದ್ರೆ ತಕ್ಷಣ ಗೊತ್ತೇ ಇಲ್ಲ ಅನ್ನೋತರ ಉಡಾಫೆ ಉತ್ತರ ಕೊಡೋದು ಎಷ್ಟು ಸರಿ ಅಂತ ಕನ್ನಡಿಗರು ಕೆರಳಿ ಕೆಂಡವಾಗ್ತಿದ್ದಾರೆ. ಸತ್ಯ ಹೇಳೋದಾದ್ರೆ, ಬೆಂಗಳೂರಿಗೆ ಬಂದಾಗೆಲ್ಲ ನಮಸ್ಕಾರ ಅಂತ ಕನ್ನಡದಲ್ಲೇ ಮಾತು ಶುರುಮಾಡಿ ಕ್ಯೂಟ್ ಆಗಿ ನಗುತ್ತಿದ್ದ ಸಾಯಿ ಪಲ್ಲವಿ, ಟಿವಿ ಶೋಗೆ ಹೋಗಿ ಹೀಗೆ ನಿರ್ಲಕ್ಷ್ಯವಾಗಿ ಮಾತನಾಡಿದ್ದು ಅಭಿಮಾನಿಗಳಿಗೆ ನಿಜಕ್ಕೂ ಬೇಸರ ತಂದಿದೆ.
ಈ ಹಿಂದೆಯೂ ಕನ್ನಡ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದ ಈ ನಟಿ, ಇತ್ತೀಚೆಗೆ ರಾಮಾಯಣ ಸಿನಿಮಾ ಈವೆಂಟ್ನಲ್ಲೂ ಕನ್ನಡದಲ್ಲೇ ಮಾತಾಡಿದ್ದರು. ಅಷ್ಟೇ ಅಲ್ಲ, 2022ರಲ್ಲಿ ಬಿಡುಗಡೆಯಾದ ಗಾರ್ಗಿ ಸಿನಿಮಾಗೆ ಸಾಯಿ ಪಲ್ಲವಿ ಸ್ವತಃ ತಾವೇ ತಮ್ಮ ಸ್ವಂತ ಧ್ವನಿಯಲ್ಲಿ ತಮ್ಮ ಪಾತ್ರಕ್ಕೆ ಕನ್ನಡದಲ್ಲೇ ಡಬ್ ಮಾಡಿದ್ದರು. ಹೀಗಿರುವಾಗ ಅಪ್ಪಟ ಮುಗ್ಧೆಯಂತೆ ಕನ್ನಡವೇ ಬರೋದಿಲ್ಲ ಅಂದಿದ್ದು ಡಬಲ್ ಸ್ಟ್ಯಾಂಡರ್ಡ್ಸ್ ಅನಿಸಲ್ವಾ ಅಂತ ನೆಟ್ಟಿಗರ ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಇನ್ನು ಇಲ್ಲಿ ಮತ್ತೊಂದು ರೋಚಕ ಟ್ವಿಸ್ಟ್ ಅಂದ್ರೆ, ಸಾಯಿ ಪಲ್ಲವಿ ಅವರ ಮಾತೃಭಾಷೆ ಬಡಗ. ಅದು ನಮ್ಮ ಹಳೆಗನ್ನಡಕ್ಕೆ ತುಂಬಾನೇ ಹತ್ತಿರವಿರುವ ದ್ರಾವಿಡ ಭಾಷೆ. ಕನ್ನಡದ ಒಡಹುಟ್ಟಿದ ಭಾಷೆಯಂತಿರುವ ಬಡಗ ಭಾಷೆ ಮಾತನಾಡುವವರೇ ಕನ್ನಡ ಬರೋದಿಲ್ಲ ಅಂದ್ರೆ ನಂಬೋಕೆ ಆಗುತ್ತಾ..? ತಮ್ಮ ಮೂಲ ಭಾಷೆಯ ನಂಟನ್ನೇ ಮರೆಮಾಚಿ, ಪರಭಾಷೆ ಮುಂದೆ ಕನ್ನಡವನ್ನು ಕಡೆಗಣಿಸಿದ್ರಾ ಅನ್ನೋ ಆಕ್ರೋಶ ಸಿನಿಪ್ರಿಯರಲ್ಲಿ ಹಾಗೂ ಚಿತ್ರರಂಗದಲ್ಲಿ ಭುಗಿಲೆದ್ದಿದೆ.
ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಎರಡು ಬಣಗಳೇ ಸೃಷ್ಟಿಯಾಗಿವೆ. ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ ಹೇಳೋದ್ರಲ್ಲಿ ತಪ್ಪೇನಿದೆ..? ಅಂತ ಕೆಲವರು ಸಾಯಿ ಪಲ್ಲವಿಯನ್ನ ಸಮರ್ಥಿಸಿಕೊಂಡು ವಾದ ಮಾಡುತ್ತಿದ್ದಾರೆ. ಮತ್ತಷ್ಟು ಮಂದಿ.. ಕನ್ನಡದ ಹೆಸರಿನಲ್ಲಿ ಸ್ಟಾರ್ಡಮ್ ಪಡೆದು ಈಗ ಕನ್ನಡ ಅಂದ್ರೆ ಬಾಯಿ ಮುಚ್ಚಿಕೊಳ್ಳೋದು ಕೃತಜ್ಞತೆ ಇಲ್ಲದ ವರ್ತನೆ ಅಂತ ಟೀಕಿಸುತ್ತಿದ್ದಾರೆ. ಒಟ್ಟಿನಲ್ಲಿ, ಸಾಯಿ ಪಲ್ಲವಿಯ ಈ ಒಂದೇ ಒಂದು ಮಾತು ಸ್ಯಾಂಡ್ವುಡ್ನಲ್ಲಿ ಸಖತ್ ಸಂಚಲನ ಮೂಡಿಸಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
