ಬೆಂಗಳೂರು: ಪ್ರತಿ ವರ್ಷ ಏಪ್ರಿಲ್ 1 ಬಂತೆಂದರೆ ಸಾಕು, ಒಬ್ಬರನ್ನೊಬ್ಬರು ಹೇಗೆ ಯಾಮಾರಿಸುವುದು, ಹೇಗೆ ‘ಫೂಲ್’ ಮಾಡುವುದು ಎಂಬ ಆಲೋಚನೆಯಲ್ಲೇ ಜನರಿರುತ್ತಾರೆ. ಆದರೆ, ಸದಾ ವಿಭಿನ್ನವಾಗಿ ಆಲೋಚಿಸುವ ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ಈ ಸಂಪ್ರದಾಯಕ್ಕೆ ಹೊಸ ತಿರುವು ನೀಡಿದ್ದಾರೆ. ಏಪ್ರಿಲ್ 1 ಎಂದರೆ ಅದು ಮೂರ್ಖರ ದಿನವಲ್ಲ, ಬದಲಿಗೆ ಅದು ಬುದ್ಧಿವಂತರ ದಿನ (Intelligent Day) ಎಂದು ಹೇಳುವ ಮೂಲಕ ಸಮಾಜಕ್ಕೆ ಒಂದು ಪಾಸಿಟಿವ್ ಸಂದೇಶ ರವಾನಿಸಿದ್ದಾರೆ.
ಟ್ವಿಸ್ಟ್ ನೀಡಿದ ಉಪ್ಪಿ ಪೋಸ್ಟ್
ಕೆಲವು ದಿನಗಳ ಹಿಂದೆ ಉಪೇಂದ್ರ ಅವರು ಏಪ್ರಿಲ್ 1ಕ್ಕೆ ಸರಿಯಾದ ಲಿಂಕ್ ಪೋಸ್ಟ್ ಮಾಡ್ತೀನಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಹೊಸ ಸಿನಿಮಾ ಘೋಷಣೆಯೋ ಅಥವಾ ರಾಜಕೀಯ ನಡೆಯೋ ಎಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ ಇಂದು ಅವರು ಹೇಲಿದ್ದ ಆಲಿಂಕ್ ಪೋಸ್ಟ್ ಮಾಡುವ ಮೂಲಕ ಅಬಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಉಪೇಂದ್ರ ಅವರ ಪೋಸ್ಟ್‌ನಲ್ಲಿ, ಇಂದು ಯಾರನ್ನೂ ನಾವು ಫೂಲ್ ಮಾಡುವುದು ಬೇಡ. ಒಬ್ಬರ ಕಾಲು ಇನ್ನೊಬ್ಬರು ಎಳೆಯೋದು ಬೇಡ, ಒಬ್ಬರ ಕೈ ಇನ್ನೊಬ್ಬರು ಹಿಡಿದು ಮೇಲೆತ್ತೋಣ. ಇದು ಕಾಲೆಳೆಯುವ ದಿನವಲ್ಲ, ಕೈ ಹಿಡಿದು ನಡೆಸುವ ಬುದ್ಧಿವಂತರ ದಿನವಾಗಲಿ ಎಂದು ಅವರು ಕರೆ ನೀಡಿದ್ದಾರೆ.
ಸಮಾಜದಲ್ಲಿ ಒಬ್ಬರ ಬೆಳವಣಿಗೆಯನ್ನು ಕಂಡು ಕಾಲೆಳೆಯುವವರೇ ಹೆಚ್ಚು. ಇಂತಹ ನೆಗೆಟಿವ್ ಮನಸ್ಥಿತಿಯನ್ನು ದೂರ ಮಾಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮತ್ತು ಪರಸ್ಪರ ಬೆಂಬಲ ನೀಡುವ ಮನಸ್ಥಿತಿ ಬೆಳೆಸಿಕೊಳ್ಳೋಣ ಎಂದು ಉಪ್ಪಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ಲಾರಿಟಿ ?
ಈಗಾಗಲೇ ಉಪೇಂದ್ರ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಇದರ ಬಗ್ಗೆ ಮತ್ತಷ್ಟು ವಿವರಣೆ ನೀಡಲು ಅವರು ಇಂದು ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಈ ಬುದ್ಧಿವಂತರ ದಿನದ ಪರಿಕಲ್ಪನೆಯನ್ನು ಅವರು ತಮ್ಮ ‘ಪ್ರಜಾಕೀಯ’ದ ಮೂಲಕ ಹೇಗೆ ಜಾರಿಗೆ ತರಲಿದ್ದಾರೆ ಅಥವಾ ಇದು ಅವರ ಮುಂಬರುವ ಸಿನಿಮಾದ ಭಾಗವೇ ಎಂಬ ಕುತೂಹಲಕ್ಕೆ ಅಲ್ಲಿ ಉತ್ತರ ಸಿಗಲಿದೆ.
ಒಟ್ಟಿನಲ್ಲಿ, ಏಪ್ರಿಲ್ 1ಕ್ಕೆ ಒಂದು ಹೊಸ ಗೌರವ ಮತ್ತು ಅರ್ಥವನ್ನು ಕಲ್ಪಿಸಿಕೊಡುವ ಮೂಲಕ ಉಪೇಂದ್ರ ಮತ್ತೊಮ್ಮೆ ತಾನೇಕೆ ವಿಭಿನ್ನವಾಗಿ ಆಲೋಚಿಸುವ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ.
