ಹೈದರಾಬಾದ್: ತೆರೆಯ ಮೇಲಿನ ಸೂಪರ್ ಹಿಟ್ ಜೋಡಿಯಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಈ ದಂಪತಿ ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿರುವ ಪ್ರೀತಿಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಬೇಸರ ಮಾಡಿಕೊಂಡಿದ್ದ ಪುಟ್ಟ ಬಾಲಕಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಈ ಸ್ಟಾರ್ ಜೋಡಿ ಎಲ್ಲರ ಮನ ಗೆದ್ದಿದೆ.
ಕಳೆದ ಫೆಬ್ರವರಿ 28ರಂದು ರಶ್ಮಿಕಾ ಮತ್ತು ವಿಜಯ್ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಬಾಲಕಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ತನ್ನ ಮುಗ್ಧ ಪ್ರಶ್ನೆಗಳನ್ನು ಕೇಳಿದ್ದಳು. ನಾನು ನಿಮ್ಮ ದೊಡ್ಡ ಅಭಿಮಾನಿ ಅಲ್ವಾ ? ನನ್ನನ್ನೇಕೆ ಮದುವೆಗೆ ಕರೆದಿಲ್ಲ ? ಎಲ್ಲರಿಗೂ ಲಡ್ಡು ಕೊಟ್ಟು ಅನ್ನದಾನ ಮಾಡುತ್ತಿದ್ದೀರಿ, ನನಗೆ ಯಾಕಿಲ್ಲ ? ಎಂದು ಮುದ್ದಾಗಿ ಮುನಿಸಿಕೊಂಡಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಮನಿಸಿದ ವಿಜಯ್ ದೇವರಕೊಂಡ, ಚಿನ್ನಿ, ನಿನ್ನನ್ನು ಶೀಘ್ರವೇ ಮನೆಗೆ ಊಟಕ್ಕೆ ಕರೆಯುತ್ತೇನೆ ಎಂದು ಭರವಸೆ ನೀಡಿದ್ದರು.
ತಮ್ಮ ಮಾತಿನಂತೆ ಈ ದಂಪತಿ ಇತ್ತೀಚೆಗೆ ಆ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಿಜಯ್ ಆ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರೆ, ರಶ್ಮಿಕಾ ಮಂದಣ್ಣ ಆಕೆಯ ತಟ್ಟೆಗೆ ಲಡ್ಡುಗಳನ್ನು ಬಡಿಸಿ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ವಿಜಯ್ ಕೂಡ ಸ್ವತಃ ಆಕೆಗೆ ಊಟ ಬಡಿಸಿ ಆತಿಥ್ಯ ನೀಡಿದ್ದಾರೆ. ನಾವಿಬ್ಬರು ಫ್ರೆಂಡ್ಸ್ ಅಲ್ವಾ ? ಎಂದು ಬಾಲಕಿ ಕೇಳಿದಾಗ, ದಂಪತಿ ನಗುತ್ತಾ ಹೌದು, ನಾವು ಬೆಸ್ಟ್ ಫ್ರೆಂಡ್ಸ್ ಎಂದು ಉತ್ತರಿಸಿದ್ದಾರೆ.
ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ಬಾಲಕಿಯ ಕುಟುಂಬ, ವಿಜಯ್ ಮತ್ತು ರಶ್ಮಿಕಾ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದು ಅದ್ಭುತ ಅನುಭವ. ಅವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ತೆರೆಯ ಮೇಲೆ ಕಾಣುವಂತೆಯೇ ನಿಜ ಜೀವನದಲ್ಲೂ ಅವರು ತುಂಬಾ ಸರಳ ವ್ಯಕ್ತಿತ್ವದವರು ಎಂದು ಸಂತಸ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ, ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ನಂತರ ರಶ್ಮಿಕಾ ಮತ್ತು ವಿಜಯ್ ಶೀಘ್ರದಲ್ಲೇ ‘ರಣಬಾಲಿ’ ಎಂಬ ಹೊಸ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ. ಮದುವೆಯ ನಂತರ ಈ ಜೋಡಿ ತೆರೆಯ ಮೇಲೆ ಹೇಗೆ ಮಿಂಚಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
