ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಬಾಲಿವುಡ್ ನಟ ರಣ್‌ಬೀರ್ ಕಪೂರ್, ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಹಾಗೂ ಕೆಜಿಎಫ್ ಖ್ಯಾತಿಯ ಯಶ್ ಅಭಿನಯಿಸಿರುವ ಈ ಮಹತ್ವಾಕಾಂಕ್ಷೆಯ ಸಿನಿಮಾ 2026ರ ನವೆಂಬರ್ 6ರಂದು, ದೀಪಾವಳಿ ಹಬ್ಬದ ದಿನದಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.
ಚಿತ್ರದ ಅಂತಾರಾಷ್ಟ್ರೀಯ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿರುವ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಆರಂಭದಿಂದಲೇ ಚಿತ್ರವನ್ನು 2026ರ ದೀಪಾವಳಿಗೆ ಬಿಡುಗಡೆ ಮಾಡುವ ಯೋಜನೆ ಇತ್ತು. ಇದೀಗ ಅದೇ ಯೋಜನೆಗೆ ಬದ್ಧರಾಗಿ ನಿರ್ಮಾಪಕರು ಜಾಗತಿಕ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಬಿಡುಗಡೆಯ ದಿನಾಂಕದ ಘೋಷಣೆಯೊಂದಿಗೆ ಚಿತ್ರದ ಇಂಗ್ಲಿಷ್ ಟ್ರೇಲರ್ ಕೂಡ ಬಿಡುಗಡೆಯಾಗಿದೆ.
ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ1’ಗೆ ಸೋಲೋ ರಿಲೀಸ್ ಲಭಿಸುವ ಸಾಧ್ಯತೆ ಹೆಚ್ಚಾಗಿದೆ. ನವೆಂಬರ್ ಮೊದಲ ವಾರದಲ್ಲಿ ಯಾವುದೇ ದೊಡ್ಡ ಬಜೆಟ್‌ನ ಅಥವಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಡಿಸೆಂಬರ್‌ನಲ್ಲಿ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾ ಬಿಡುಗಡೆಯಾಗಲಿರುವುದರಿಂದ, ನವೆಂಬರ್‌ನಲ್ಲಿ ‘ರಾಮಾಯಣ’ಕ್ಕೆ ಉತ್ತಮ ಅವಕಾಶ ಸಿಗಲಿದೆ.
ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಈ ಚಿತ್ರಕ್ಕೆ ಜಪಾನ್‌ನ ಖ್ಯಾತ ಫ್ರಾಂಚೈಸಿಯ ‘ಗಾಡ್ಜಿಲ್ಲಾ ಮೈನಸ್ ಝೀರೋ’ ಚಿತ್ರದೊಂದಿಗೆ ನೇರ ಪೈಪೋಟಿ ಎದುರಾಗಲಿದೆ. ವಿಶೇಷವೆಂದರೆ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಐಮ್ಯಾಕ್ಸ್ ಸೇರಿದಂತೆ ಪ್ರೀಮಿಯಂ ಫಾರ್ಮ್ಯಾಟ್‌ಗಳಲ್ಲಿ ಪ್ರದರ್ಶನಗೊಳ್ಳಲಿವೆ. ಹೀಗಾಗಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕುತೂಹಲಕಾರಿ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ, ಆಸ್ಕರ್ ಪ್ರಶಸ್ತಿ ವಿಜೇತ VFX ಸಂಸ್ಥೆ DNEG ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಒಟ್ಟು ನಿರ್ಮಾಣ ವೆಚ್ಚ ಸುಮಾರು 4,000 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ.
ಚಿತ್ರದಲ್ಲಿ ರಣ್‌ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್, ದಶರಥನಾಗಿ ಅರುಣ್ ಗೋವಿಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸಿದ್ದಾರೆ. ಇದರ ಜೊತೆಗೆ ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಶೀಬಾ ಚಡ್ಡಾ, ವಿವೇಕ್ ಒಬೆರಾಯ್, ಇಂದಿರಾ ಕೃಷ್ಣನ್, ಅಮಿತಾಭ್ ಬಚ್ಚನ್, ಮೋಹಿತ್ ರೈನಾ, ಆದಿನಾಥ್ ಕೊಠಾರೆ ಮತ್ತು ಕುನಾಲ್ ಕಪೂರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
