ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿಗೆ ಈಗ ಸ್ವಂತ ಫ್ಯಾನ್ಸ್ ಸಖತ್ ಕ್ಲಾಸ್ ತಗೋಳ್ತಿದ್ದಾರೆ. ಹೌದು, ಎಪ್ಪತ್ತರ ಹರೆಯದಲ್ಲೂ ಯುವ ನಟರಿಗೆ ಟಕ್ಕರ್ ಕೊಡ್ತಾ, ಚಿತ್ರರಂಗದ ದೊಡ್ಡಣ್ಣನಾಗಿದ್ದ ಚಿರಂಜೀವಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.
ರಾಮ್ ಚರಣ್‌ಗೆ ‘ಮೆಗಾಸ್ಟಾರ್’ ಪಟ್ಟ.. ಚಿರು ಫ್ಯಾನ್ಸ್ ಬೇಸರ
ಚಿರಂಜೀವಿ ಹೇಳಿಕೆಗೆ ನೆಪೋಟಿಸಂ ಕಾರ್ಡ್ ಎಳೆದ ನೆಟ್ಟಿಗರು..!
ರಾಮ್ ಚರಣ್‌ಗೆ ನ್ಯಾಷನಲ್ ಅವಾರ್ಡ್ ಬೇಕೇ ಬೇಕು ಎಂದ ತಂದೆ
‘ಬಾಹುಬಲಿ’ಗಿಂತ ಮಗಧೀರನೇ ಬೆಸ್ಟ್ ಅಂದಿದ್ದ ಹಳೇ ಕತೆ ರೀ-ಓಪನ್
ಇತ್ತೀಚೆಗಷ್ಟೇ ರಿಲೀಸ್ ಆಗಿ ಧೂಳೆಬ್ಬಿಸುತ್ತಿರುವ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಚಿರಂಜೀವಿ ಆಡಿರೋ ಮಾತುಗಳು ಈಗ ದೊಡ್ಡ ಇಂಟರ್ನೆಟ್ ಯುದ್ಧಕ್ಕೆ ಕಾರಣವಾಗಿದೆ. “ನನ್ನ ಮೆಗಾಸ್ಟಾರ್ ಬಿರುದನ್ನು ನಾನೇ ನನ್ನ ಮಗನಿಗೆ ಕೊಡ್ತಿದ್ದೀನಿ, ಸ್ವತಃ ಪ್ರಧಾನಿ ಮೋದಿಯವರೇ ಚರಣ್‌ನ ಭವಿಷ್ಯದ ಮೆಗಾಸ್ಟಾರ್ ಅಂದಿದ್ದಾರೆ” ಅಂತ ಚಿರು ಸ್ಟೇಜ್ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಇದನ್ನ ಕೇಳಿಸಿಕೊಂಡ ನೆಟ್ಟಿಗರು, “ಅಣ್ಣಾ.. ಬಿರುದು ಅನ್ನೋದು ಕಷ್ಟಪಟ್ಟು ಸಂಪಾದಿಸಬೇಕೇ ಹೊರತು, ಆಸ್ತಿ ತರ ಮಗನಿಗೆ ಗಿಫ್ಟ್ ಕೊಡೋದಲ್ಲ” ಅಂತ ನೆಪೋಟಿಸಂ ಕಾರ್ಡ್ ಎಳೆದು ಚಿರಂಜೀವಿ ಕಾಲೆಳೆಯುತ್ತಿದ್ದಾರೆ.
ಟ್ವಿಸ್ಟ್ ಇರೋದೇ ಇಲ್ಲಿ ವೇದಿಕೆಯಲ್ಲಿ ಚಿರಂಜೀವಿ, “ಈ ಬಾರಿ ನನ್ನ ಮಗನಿಗೆ ನ್ಯಾಷನಲ್ ಅವಾರ್ಡ್ ಸಿಗಲೇಬೇಕು” ಅಂತ ಹಠ ಹಿಡಿದವರಂತೆ ಮಾತನಾಡಿದ್ದಾರೆ. ಇದರ ಹಿಂದೆ ಮೆಗಾ ಫ್ಯಾಮಿಲಿಯ ಒಳಗಿನ ಆಂತರಿಕ ಕೋಲ್ಡ್ ವಾರ್ ಇದೆ ಅಂತ ಗಾಸಿಪ್ ಹಬ್ಬಿದೆ. ಆಲ್ರೆಡಿ ‘ಪುಷ್ಪ’ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರೋದ್ರಿಂದ, ಮೆಗಾ ಕ್ಯಾಂಪ್‌ನಲ್ಲಿ ಒಂಥರಾ ಇಗೋ ಹರ್ಟ್ ಆಗಿದೆ. ಅಲ್ಲು ಅರ್ಜುನ್‌ಗೆ ಕೌಂಟರ್ ಕೊಡೋಕೆ ಮತ್ತು ಮಗನನ್ನ ಅವರಿಗಿಂತ ಮೇಲೆ ಕೂರಿಸೋಕೆ ಚಿರಂಜೀವಿ ತಮ್ಮ ಇಡೀ ಪ್ರಭಾವ ಬಳಸ್ತಿದ್ದಾರೆ ಅನ್ನೋದು ಸದ್ಯ ಟಾಲಿವುಡ್‌ನ ಬಿಸಿಬಿಸಿ ಚರ್ಚೆ.
ಚಿರಂಜೀವಿ ಅವರ ಈ ಪುತ್ರ ವ್ಯಾಮೋಹ ಇವತ್ತಿನದ್ದಲ್ಲ ಅಂತ ನೆಟ್ಟಿಗರು ಅವರ ಹಳೇ ಹಿಸ್ಟರಿಯನ್ನ ಕೆದಕುತ್ತಿದ್ದಾರೆ. ಹಿಂದೆ ರಾಜಮೌಳಿಯವರ ‘ಬಾಹುಬಲಿ 1’ ಇಡೀ ವಿಶ್ವದಲ್ಲೇ ದಾಖಲೆ ಬರೆಯುತ್ತಿದ್ದಾಗ, ಅದನ್ನ ಮೆಚ್ಚಿಕೊಳ್ಳದ ಚಿರಂಜೀವಿ, ಅದಕ್ಕಿಂತ ತನ್ನ ಮಗನ ‘ಮಗಧೀರ’ ಚಿತ್ರವೇ ಬೆಸ್ಟ್ ಅಂತ ಸ್ಟೇಟ್‌ಮೆಂಟ್ ಕೊಟ್ಟಿದ್ದರು. ಈಗ ಆ ಹಳೆಯ ವಿಡಿಯೋ ತುಣುಕುಗಳನ್ನು ವೈರಲ್ ಮಾಡಿರೋ ಸಿನಿಮಾ ಪ್ರೇಕ್ಷಕರು, “ಮೆಗಾಸ್ಟಾರ್ ಅವರೇ, ಬೇರೆ ನಟರ ಸಾಧನೆಯನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ನಿಮಗೇಕೆ ಬರುತ್ತಿಲ್ಲ?” ಎಂದು ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿಯೇ ಪ್ರಶ್ನೆ ಮಾಡ್ತಿದ್ದಾರೆ
ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಬ್ಯಾಕ್‌ಗ್ರೌಂಡ್ ಇದ್ದರೂ, ಪ್ರೇಕ್ಷಕರ ಪ್ರೀತಿ ಮತ್ತು ಯಶಸ್ಸನ್ನು ಬಿರುದುಗಳಂತೆ ಹಸ್ತಾಂತರಿಸಲು ಸಾಧ್ಯವಿಲ್ಲ. ರಾಮ್ ಚರಣ್ ಈಗಾಗಲೇ ತಮ್ಮದೇ ಆದ ಸ್ವಂತ ಸಾಮರ್ಥ್ಯದಿಂದ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ ಚಿರಂಜೀವಿ ಅವರ ಈ ಅತಿಯಾದ ಪುತ್ರ ವ್ಯಾಮೋಹ ಮತ್ತು ಪ್ರಶಸ್ತಿಗಳಿಗಾಗಿನ ಹಠ ಅವರ ಗೌರವಕ್ಕೆ ಧಕ್ಕೆ ತರುತ್ತಿದೆ. ಸಿನಿಮಾ ಲೋಕದಲ್ಲಿ ಯಾರೇ ಮುನ್ನೆಲೆಗೆ ಬರಬೇಕಾದರೂ ಅದಕ್ಕೆ ಜನರ ಪ್ರೀತಿ ಮತ್ತು ಬಾಕ್ಸ್ ಆಫೀಸ್ ಸುಲ್ತಾನನ ಪಟ್ಟ ಸಿಗಬೇಕೇ ಹೊರತು, ಅದು ಬಿರುದುಗಳ ಹಸ್ತಾಂತರದಿಂದ ಸಾಧ್ಯವಿಲ್ಲ ಎನ್ನುವುದೇ ಸಿನಿರಸರ ಅಂತಿಮ ಅಭಿಪ್ರಾಯ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
