ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಹಲವು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಬೆಂಗಳೂರು ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ. ದಿಲೀಪ್ ಕುಮಾರ್ ಎಂಬುವರು ದಾಖಲಿಸಿದ ದೂರಿನ ಆಧಾರದ ಮೇಲೆ ಈ ಪ್ರಕರಣ ಮುಂದುವರಿದಿದ್ದು, ಒಂದೇ ಹೆಸರಿನಲ್ಲಿ ನಾಲ್ಕು ವಿಭಿನ್ನ ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂಬ ಗಂಭೀರ ಆರೋಪ ನಟರ ಮೇಲೆ ಹೊರಿಸಲಾಗಿದೆ.
ದಿಲೀಪ್ ಕುಮಾರ್ ಎಂಬವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ನ್ಯಾಯಾಲಯವು ಈ ಹಿಂದೆ ಎರಡು ಬಾರಿ ಸಮನ್ಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ನಟ ಪ್ರಕಾಶ್ ರಾಜ್ ಅವರು ನ್ಯಾಯಾಲಯದ ಸೂಚನೆಗಳನ್ನು ಪಾಲಿಸದೆ ವಿಚಾರಣೆಗೆ ಹಾಜರಾಗಿಲ್ಲ ಎಂದು ದಾಖಲೆಗಳಲ್ಲಿ ಹೇಳಲಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಕ್ರಮವಾಗಿ ವೋಟರ್ ಐಡಿ ಹೊಂದಿದ್ದಾರೆ ಎಂಬುದಾಗಿ ದೂರುದಾರರು ಆರೋಪಿಸಿದ್ದಾರೆ. ಈ ಸಂಬಂಧ 48ನೇ ಎಸಿಜೆಎಂ ಕೋರ್ಟ್ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಈಗಾಗಲೇ ಹಲವು ಬಾರಿ ಸಮನ್ಸ್ ಹಾಗೂ ಬಂಧನ ವಾರಂಟ್ ಜಾರಿಗೊಳಿಸಿದ್ದರೂ, ಪ್ರಕಾಶ್ ರಾಜ್ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ವರದಿಯಾಗಿದೆ. ಎರಡು ಬಾರಿ ಸಮನ್ಸ್ ಜಾರಿ ಮಾಡಿದರೂ, ನಂತರ ಎರಡು ಬಾರಿ NBW ನೀಡಿದರೂ ಸಹ ಅವರು ಕೋರ್ಟ್ ಮುಂದೆ ಹಾಜರಾಗದ ಕಾರಣ, ಇದೀಗ ಮೂರನೇ ಬಾರಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
ಚುನಾವಣಾ ನಿಯಮಗಳ ಪ್ರಕಾರ, ಭಾರತದ ಯಾವುದೇ ನಾಗರಿಕನು ದೇಶದ ಯಾವುದೇ ರಾಜ್ಯದಲ್ಲಿದ್ದರೂ ಕೇವಲ ಒಂದೇ ಮತದಾರ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಒಬ್ಬ ವ್ಯಕ್ತಿಗೆ ದೇಶದಾದ್ಯಂತ ಒಂದೇ ಮತದಾರ ಗುರುತಿನ ಚೀಟಿ ಇರಬೇಕು. ಆದರೆ ಆರೋಪಗಳ ಪ್ರಕಾರ, ನಟ ಪ್ರಕಾಶ್ ರಾಜ್ ನಾಲ್ಕು ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವು ಕಾನೂನು ಉಲ್ಲಂಘನೆಗೆ ಸಂಬಂಧಿಸಿದ ಗಂಭೀರ ಪ್ರಕರಣವಾಗಿದ್ದು, ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಪ್ರಕಾಶ್ ರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಕರಣದ ಮುಂದಿನ ಹಂತದಲ್ಲಿ ನ್ಯಾಯಾಲಯ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.
ಪ್ರಸ್ತುತ ಈ ಪ್ರಕರಣ ನ್ಯಾಯಾಲಯದ ವಿಚಾರಣಾ ಹಂತದಲ್ಲಿದ್ದು, ಮುಂದಿನ ಕಾನೂನು ಕ್ರಮಗಳು ಅವರ ಹಾಜರಾತಿ ನಂತರ ಮುಂದುವರಿಯುವ ಸಾಧ್ಯತೆ ಇದೆ.
