ಸಂಕಷ್ಟದಲ್ಲಿ ಪಲಾಶ್ ಮುಚ್ಚಲ್: ₹40 ಲಕ್ಷ ವಂಚನೆ ಆರೋಪದಡಿ ಪೊಲೀಸ್ ತನಿಖೆ ಆರಂಭ

Untitled design 2026 01 23T180830.057

ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸಹೋದರ, ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟರ್ ಸ್ಮೃತಿ ಮಂಧಾನ ಅವರೊಂದಿಗಿನ ವಿವಾಹ ಮುಂದೂಡಲ್ಪಟ್ಟ ಬೆನ್ನಲ್ಲೇ, ಪಲಾಶ್ ವಿರುದ್ಧ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ 40 ಲಕ್ಷ ರೂಪಾಯಿಗಳ ವಂಚನೆ ಆರೋಪ ಕೇಳಿಬಂದಿದೆ.ಸದ್ಯ ಈ ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಏನಿದು ವಂಚನೆ ಪ್ರಕರಣ ?

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನಿವಾಸಿಯಾಗಿರುವ ನಟ ಹಾಗೂ ನಿರ್ಮಾಪಕ ವಿಜ್ಞಾನ್ ಮಾನೆ ಎಂಬುವವರು ಪಲಾಶ್ ಮುಚ್ಚಲ್ ವಿರುದ್ಧ ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನಲ್ಲಿ 2023ರ ಡಿಸೆಂಬರ್ 5 ರಂದು ಸಾಂಗ್ಲಿಯಲ್ಲಿ ವಿಜ್ಞಾನ್ ಅವರನ್ನು ಭೇಟಿಯಾದ ಪಲಾಶ್, ಸಿನಿಮಾ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದರು. ಚಿತ್ರವೊಂದರಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಒಟಿಟಿ ಬಿಡುಗಡೆಯ ನಂತರ 12 ಲಕ್ಷ ರೂಪಾಯಿ ಲಾಭ ಬರುತ್ತದೆ ಎಂದು ಭರವಸೆ ನೀಡಿದ್ದರು. ಇದರೊಂದಿಗೆ ಚಿತ್ರದಲ್ಲಿ ನಟಿಸಲು ಒಂದು ಪಾತ್ರವನ್ನೂ ನೀಡುವುದಾಗಿ ಪಲಾಶ್ ಹೇಳಿದ್ದರು ಎನ್ನಲಾಗಿದೆ. ಈ ಮಾತನ್ನು ನಂಬಿದ ವಿಜ್ಞಾನ್ ಮಾನೆ, ಹಂತಹಂತವಾಗಿ ಮಾರ್ಚ್ 2025ರ ವೇಳೆಗೆ ಒಟ್ಟು 40 ಲಕ್ಷ ರೂಪಾಯಿಗಳನ್ನು ಪಲಾಶ್ ಅವರಿಗೆ ನೀಡಿದ್ದಾರೆ.

ಹಣ ಪಡೆದ ನಂತರ ಸಿನಿಮಾ ಯೋಜನೆಯೂ ಪೂರ್ಣಗೊಂಡಿಲ್ಲ ಮತ್ತು ನೀಡಿದ ಹಣವನ್ನೂ ಪಲಾಶ್ ಮರಳಿಸಿಲ್ಲ ಎಂದು ವಿಜ್ಞಾನ್ ಆರೋಪಿಸಿದ್ದಾರೆ. ಹಣಕ್ಕಾಗಿ ಒತ್ತಾಯಿಸಿದಾಗ ಪಲಾಶ್ ಕಡೆಯಿಂದ ಯಾವುದೇ ಸ್ಪಂದನೆ ಸಿಗದ ಕಾರಣ ವಿಜ್ಞಾನ್ ಮಾನೆ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಸಾಂಗ್ಲಿ ಪೊಲೀಸರು ಈ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಸ್ಮೃತಿ ಮಂಧಾನ-ಪಲಾಶ್ ಮದುವೆ ರದ್ದಾಗಿದ್ದೇಕೆ ?

ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ನವೆಂಬರ್ 23 ರಂದು ಅದ್ದೂರಿಯಾಗಿ ವಿವಾಹವಾಗಬೇಕಿತ್ತು. ಅರಿಶಿಣ ಮತ್ತು ಮೆಹಂದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಆದರೆ, ಮದುವೆಯ ಮುಹೂರ್ತಕ್ಕೆ ಕೆಲವೇ ಗಂಟೆಗಳ ಮೊದಲು ಸ್ಮೃತಿ ಅವರ ತಂದೆಯ ಆರೋಗ್ಯದಲ್ಲಿ ಏರುಪೇರಾಗಿ ಅವರು ಆಸ್ಪತ್ರೆಗೆ ದಾಖಲಾದರು. ಈ ಅನಿವಾರ್ಯ ಕಾರಣದಿಂದ ಮದುವೆಯನ್ನು ಮುಂದೂಡಲಾಯಿತು ಎಂದು ಅಧಿಕೃತವಾಗಿ ತಿಳಿಸಲಾಗಿತ್ತು.

ಆದರೆ ಈಗ ಪಲಾಶ್ ವಿರುದ್ಧ ಕೇಳಿಬರುತ್ತಿರುವ ವಂಚನೆ ಆರೋಪಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ. ಈ ಗಂಭೀರ ಆರೋಪಗಳ ಕುರಿತು ಪಲಾಶ್ ಮುಚ್ಚಲ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Exit mobile version