ಮಲಯಾಳಂ ಚಿತ್ರರಂಗದಲ್ಲಿ ಥ್ರಿಲ್ಲರ್ ಶೈಲಿಗೆ ಹೊಸ ರೂಪ ಕೊಟ್ಟ ಜೀತು ಜೋಸೆಫ್, ಈಗ ತಮ್ಮ ಹೊಸ ಸಿನಿಮಾ “ಮಿರಾಜ್” ಮೂಲಕ ಮರಳಿ ಬಂದಿದ್ದಾರೆ. ಅಸಿಫ್ ಅಲಿ ಮತ್ತು ಅಪರ್ಣಾ ಬಾಲಮುರಳಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಬಹುನಿರೀಕ್ಷಿತ ಸಿನಿಮಾ 2025ರ ಸೆಪ್ಟೆಂಬರ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಕರ್ನಾಟಕ ವಿತರಣೆ ಹಕ್ಕನ್ನು ಹೆಸರುವಾಸಿ ವಿತರಣೆ ಸಂಸ್ಥೆ ಬೆಂಗಳೂರು ಕುಮಾರ್ ಫಿಲಂಸ್ ಖರೀದಿಸಿದೆ.
ಈ ಸಿನಿಮಾ ಬಿಡುಗಡೆಯ ಘೋಷಣೆಯಾದ ಕ್ಷಣದಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಬಿಡುಗಡೆಗೊಂಡ ಎರಡನೇ ಪೋಸ್ಟರ್ ಹಾಗೂ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಿನಿ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ. ಪೋಸ್ಟರ್‌ನಲ್ಲಿ ನಾಯಕ-ನಾಯಕಿ ಅಚ್ಚರಿಗೊಳಿಸಿದ ಭಾವದಲ್ಲಿ ತೋರಿಸಿದ್ದು, ಸಿನಿಮಾ ಎಷ್ಟು ರೋಚಕವಾಗಿರಲಿದೆ ಎಂಬುದಕ್ಕೆ ಮೊದಲ ಸುಳಿವು ಕೊಟ್ಟಿದೆ.
ಟೀಸರ್‌ನಲ್ಲಿರುವ “ನೀವು ನೋಡುವುದನ್ನೆಲ್ಲ ನಂಬಬೇಡಿ” ಎಂಬ ಸಂದೇಶವೇ ಸಿನಿಮಾದ ಮನೋವೈಜ್ಞಾನಿಕ ರೋಮಾಂಚನದ ಸುಳಿವು ನೀಡುತ್ತದೆ. ಬ್ಲಾಕ್ಬಸ್ಟರ್ ಹಿಟ್ “ಕಿಷ್ಕಿಂದ ಕಂಡಂ” ನಂತರ ಅಸಿಫ್ ಅಲಿ, ಅಪರ್ಣಾ ಬಾಲಮುರಳಿ ಜೋಡಿ ಮತ್ತೆ ಒಟ್ಟಿಗೆ ನಟಿಸಿರೋದ್ರಿಂದ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಇವರ ಜೊತೆಗೆ ಹಕೀಂ ಶಹ್‌ಜಹಾನ್, ದೀಪಕ್ ಪರಂಬೋಲ್, ಹ್ಯಾನ್ನಾ ರೇಜಿ ಕೋಷಿ ಮತ್ತು ಸಂಪತ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರವನ್ನು E4 ಎಕ್ಸ್‌ಪೆರಿಮೆಂಟ್ಸ್, ನಾಡ್ ಸ್ಟುಡಿಯೋಸ್, ಸೆವನ್ 1 ಸೆವನ್ ಪ್ರೊಡಕ್ಷನ್ಸ್ ಮತ್ತು ಬೆಡ್‌ಟೈಮ್ ಸ್ಟೋರೀಸ್ ನಿರ್ಮಿಸುತ್ತಿವೆ. ಛಾಯಾಗ್ರಹಣವನ್ನು ಸತೀಶ್ ಕುರುಪ್ ಮತ್ತು ಸಂಗೀತವನ್ನು ವಿಷ್ಣು ಶ್ಯಾಮ್ ನಿರ್ವಹಿಸಿದ್ದಾರೆ.
ದೃಶ್ಯಂ ಸರಣಿಯ ಮೂಲಕ ಪ್ರೇಕ್ಷಕರನ್ನು ಕುತೂಹಲದಲ್ಲಿ ಕೂರಿಸಿದ ಜೀತು ಜೋಸೆಫ್, ಈಗ ‘ಮಿರಾಜ್’ ಮೂಲಕ ಮತ್ತೊಂದು ಮನಕಲಕುವ ಕಥಾಹಂದರ ತರುತ್ತಿದ್ದಾರೆ. ದೃಶ್ಯಂ 3 ಬಿಡುಗಡೆಯ ಮುನ್ನವೇ ಬರಲಿರುವ ಈ ಸಿನಿಮಾ, ಈಗಾಗಲೇ 2025ರ ಅತ್ಯಂತ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸೇರಿದೆ.
ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬೆಂಗಳೂರು ಕುಮಾರ್ ಅವರು ಮುಂದೆ ಬಂದಿದ್ದು, ಒಂದೊಳ್ಳೆ ಮೊತ್ತವನ್ನು ಕೊಟ್ಟು ಈ ಚಿತ್ರದ ವಿತರಣೆ ಹಕ್ಕನ್ನು ಖರೀದಿಸಿದ್ದು, ಸೆಪ್ಟೆಂಬರ್ 19 ರಂದು ಕರ್ನಾಟಕದ ಪ್ರಮುಖ ಕೇಂದ್ರಗಳಲ್ಲಿ ತೆರೆಗೆ ತರಲಿದ್ದಾರೆ.
