‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಅವರು ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಮನು ಅವರ ವಿರುದ್ಧ ಗಂಭೀರವಾದ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಅವರ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಆರೋಪದ ಹಿಂದೆ ಒಂದು ದೊಡ್ಡ ಷಡ್ಯಂತ್ರವಿದೆ ಎಂದು ಮನು ಆರೋಪಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿರುದ್ಧ ಇಬ್ಬರು ಹೀರೋಗಳು ಮತ್ತು ಒಬ್ಬ ಲೇಡಿ ಡಾನ್ ಒಟ್ಟಾಗಿ ಷಡ್ಯಂತ್ರ ಮಾಡಿದ್ದಾರೆ ಎಂದು ಮನು ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಇವರೆಲ್ಲರೂ ನನ್ನ ಸಾವನ್ನೇ ಬಯಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಆರೋಪ ಮಾಡಲಾಗಿದೆ. ಶೀಘ್ರವೇ ಈ ಇಬ್ಬರು ಹೀರೋಗಳು ಮತ್ತು ಲೇಡಿ ಡಾನ್‌ನ ಹೆಸರನ್ನು ಬಹಿರಂಗಪಡಿಸುವೆ,” ಎಂದು ಮನು ತಿಳಿಸಿದ್ದಾರೆ.
ಮಡೆನೂರು ಮನು ಅವರ ನಾಯಕನಟನಾಗಿ ಅಭಿನಯಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೇ 23, 2025ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಮನು ಜೊತೆಗೆ ಮೌನ ಗುಡ್ಡೇಮನೆ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಕೆ. ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಿಸಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೆ ಒಂದು ದಿನ ಮೊದಲೇ ಈ ಆರೋಪದಿಂದಾಗಿ ಚಿತ್ರತಂಡಕ್ಕೆ ಆಘಾತವಾಗಿದೆ. ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾದ ನಿರ್ಮಾಪಕ ಸಂತೋಷ್ ಕುಮಾರ್, “ಮನು ಸೆಟ್‌ನಲ್ಲಿ ಯಾವುದೇ ರೀತಿಯಲ್ಲಿ ತಪ್ಪಾಗಿ ವರ್ತಸಿಲ್ಲ. ಒಬ್ಬರ ಆರೋಪದಿಂದ ಸಿನಿಮಾವನ್ನು ಮುಂದೂಡಲು ಸಾಧ್ಯವಿಲ್ಲ. ‘ಕುಲದಲ್ಲಿ ಕೀಳ್ಯಾವುದೋ’ ಯಾವುದೇ ಅಡೆತಡೆಯಿಲ್ಲದೆ ತೆರೆಕಾಣಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ನಟಿಯೊಬ್ಬರು ದಾಖಲಿಸಿರುವ ದೂರಿನಲ್ಲಿ, “2018ರಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಮನು ಜೊತೆ ಸ್ನೇಹ ಬೆಳೆಸಿಕೊಂಡೆವು. ಸಿನಿಮಾ ಮಾಡಲು ಆತನಿಗೆ ಲಕ್ಷಾಂತರ ರೂಪಾಯಿ ನೀಡಿದ್ದೇನೆ. ಆದರೆ, ಮದುವೆಯ ಭರವಸೆ ನೀಡಿ ಅತ್ಯಾಚಾರ ಎಸಗಿ, ಗರ್ಭಪಾತ ಮಾಡಿಸಿದ್ದಾನೆ. ನನ್ನ ಮೇಲೆ ಹಲ್ಲೆ ಮಾಡಿ, ಪ್ರಾಣಬೆದರಿಕೆ ಹಾಕಿದ್ದಾನೆ,” ಎಂದು ಆರೋಪಿಸಿದ್ದಾರೆ. ಈ ಆರೋಪದಿಂದಾಗಿ ಮನು ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ಜೊತೆಗೆ, ಮನು ತಮ್ಮ ಮೇಲಿನ ಆರೋಪವನ್ನು ಖಂಡಿಸಿ, “ಇದೊಂದು ಉದ್ದೇಶಪೂರ್ವಕ ಷಡ್ಯಂತ್ರ. ನನ್ನನ್ನು ಕೆಡವಲು ಇಬ್ಬರು ಹೀರೋಗಳು ಮತ್ತು ಲೇಡಿ ಡಾನ್ ಒಟ್ಟಾಗಿ ಈ ಆರೋಪವನ್ನು ಮಾಡಿದ್ದಾರೆ,” ಎಂದು ಹೇಳಿಕೊಂಡಿದ್ದಾರೆ.





