ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ ಖ್ಯಾತಿಯ ನಟಿ ಕೌಸ್ತುಭ ಮಣಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಶುಭವಾರ್ತೆಯನ್ನು ಅಧಿಕೃತವಾಗಿ ಘೋಷಿಸಿದ ಕೌಸ್ತುಭ ಅವರಿಗೆ ಅಭಿಮಾನಿಗಳು ಹಾಗೂ ಸಹ ಕಲಾವಿದರಿಂದ ಶುಭಾಶಯಗಳ ಮಳೆಗರೆದಿದೆ.
ಕೌಸ್ತುಭ ಮಣಿ ಮತ್ತು ಸಿದ್ಧಾಂತ್ ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬದ ಹಿರಿಯರ ಉಪಸ್ಥಿತಿಯಲ್ಲಿ ಈ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈಗ ತಾಯಿಯಾಗುವ ಸಂಭ್ರಮದೊಂದಿಗೆ, ಕೌಸ್ತುಭ ಅವರು ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಕೌಸ್ತುಭ ಮಣಿ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿದ್ದಾರೆ. ಅರ್ಜುನ್ ಜನ್ಯ ಅವರ ನಿರ್ದೇಶನದ ‘45’ ಚಿತ್ರದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಹುಭಾಷಾ ಚಿತ್ರವು ಆಗಸ್ಟ್ 15, 2025 ರಂದು ತೆರೆಕಾಣಲಿದೆ.





