ಕೆಜಿಎಫ್ ಸರಣಿಯ ನಂತರ ಇಡೀ ವಿಶ್ವವೇ ಎದುರು ನೋಡುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ (Toxic). ಈ ಚಿತ್ರದ ಘೋಷಣೆಯಾದ ದಿನದಿಂದಲೂ ಇದರಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬ ಕುತೂಹಲ ಮನೆಮಾಡಿತ್ತು. ಇತ್ತೀಚೆಗೆ ಈ ಚಿತ್ರದ ಪ್ರಮುಖ ಆಕರ್ಷಣೆಯಾದ ಬಾಲಿವುಡ್ ಸುಂದರಿ ಕಿಯಾರಾ ಅಡ್ವಾಣಿ ಅವರ ‘ನಾದಿಯಾ’ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದೆ. ಈ ಕುರಿತು ಕಿಯಾರಾ ಅಡ್ವಾಣಿ ಹಂಚಿಕೊಂಡಿರುವ ಹೊಸ ಪೋಸ್ಟ್ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಕಿಯಾರಾ ಅಡ್ವಾಣಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ‘ನಾದಿಯಾ’ ಪಾತ್ರಕ್ಕಾಗಿ ತಾವು ಪಟ್ಟ ಶ್ರಮವನ್ನು ವಿವರಿಸಿದ್ದಾರೆ. ಈ ಪಾತ್ರವು ನನ್ನಿಂದ ಕೇವಲ ನಟನೆಯನ್ನು ಮಾತ್ರ ಬಯಸಲಿಲ್ಲ, ಬದಲಾಗಿ ನನ್ನನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪೂರ್ಣವಾಗಿ ಪರೀಕ್ಷಿಸಿತು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪಾತ್ರದ ಚಿತ್ರೀಕರಣದ ಅವಧಿಯಲ್ಲಿ ತಮ್ಮ ವ್ಯಕ್ತಿತ್ವದಲ್ಲೇ ಒಂದು ರೀತಿಯ ಬದಲಾವಣೆ ಆದ ಅನುಭವವಾಯಿತು ಎಂದು ಮನಬಿಚ್ಚಿ ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ಈಗಾಗಲೇ ಹಲವು ವಿಭಿನ್ನ ಪಾತ್ರಗಳನ್ನು ಮಾಡಿರುವ ಕಿಯಾರಾ ಅವರಿಗೆ ‘ಟಾಕ್ಸಿಕ್’ ಚಿತ್ರದ ನಾದಿಯಾ ಪಾತ್ರ ಸವಾಲಾಗಿ ಪರಿಣಮಿಸಿತ್ತು. ಈ ಬಗ್ಗೆಯೂ ತಿಳಿಸಿದರುವ ಅವರು, ನಾನು ಇದುವರೆಗೆ ನಿರ್ವಹಿಸಿದ ಪಾತ್ರಗಳಲ್ಲೇ ಇದು ಅತ್ಯಂತ ಕಷ್ಟಕರವಾದದ್ದು. ತಿಂಗಳುಗಳ ಕಾಲದ ನಿರಂತರ ಹಾರ್ಡ್ ವರ್ಕ್ ಮತ್ತು ತಯಾರಿ ಈ ಪಾತ್ರದ ಹಿಂದಿದೆ. ಇದು ನನ್ನ ವೃತ್ತಿಜೀವನದ ಒಂದು ಧೈರ್ಯದ ಹೆಜ್ಜೆ ಎಂದು ಅವರು ಬರೆದುಕೊಂಡಿದ್ದಾರೆ.
ಚಿತ್ರದ ಫಸ್ಟ್ ಲುಕ್‌ಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಕಿಯಾರಾ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಫಸ್ಟ್ ಲುಕ್‌ಗೆ ಹರಿದು ಬರುತ್ತಿರುವ ಪ್ರೀತಿಯನ್ನು ಕಂಡು ತುಂಬಾ ಖುಷಿಯಾಗುತ್ತಿದೆ. ಇಂತಹ ಅದ್ಭುತ ಅವಕಾಶ ನೀಡಿದ ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಾನು ಸದಾ ಚಿರಋಣಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಟಾಕ್ಸಿಕ್’ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಯಶ್ ಅವರ ಮ್ಯಾನ್ಲಿ ಲುಕ್ ಮತ್ತು ಕಿಯಾರಾ ಅವರ ಪಾತ್ರದ ಮೇಲೆ ಸಿನಿರಸಿಕರು ಹೆಚ್ಚು ಕುತೂಹಲ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ‘ಟಾಕ್ಸಿಕ್’ ಚಿತ್ರದ ಮೂಲಕ ಕಿಯಾರಾ ಅಡ್ವಾಣಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿಯಾರಾ ಅವರ ಭಾವನಾತ್ಮಕ ಪೋಸ್ಟ್ ಚಿತ್ರದ ಮೇಲೆ ಇರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ನಾದಿಯಾ’ ತೆರೆಯ ಮೇಲೆ ಹೇಗೆ ಅಬ್ಬರಿಸಲಿದ್ದಾಳೆ ಎಂದು ಅಭಿಮಾನಿಗಳು ಈಗ ಕಾತರದಿಂದ ಕಾಯುತ್ತಿದ್ದಾರೆ.
